ಮಾಹಿತಿ ಅಸ್ಪಷ್ಟ- ಅಧಿಕಾರಿಗಳ ತರಾಟೆ

ಗುಳೇದಗುಡ್ಡ ನ.9-ನಿಮ್ಮ ಇಲಾಖೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಸಭೆಗೆ ಯಾಕೆ ಬರುತ್ತೀರಿ, ಶಾಲೆಗಳ ಪರಿಸ್ಥಿತಿ ಬಗ್ಗೆ ಸರ್ವೇ ಮಾಡಿದ್ದೇವೆ ಎಂದು ಹೇಳುತ್ತೀರಿ, ಆ ಸರ್ವೇಯ ದಾಖಲೆ ಎಲ್ಲಿದೆ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಆಸಂಗೆಪ್ಪ ನಕ್ಕರಗುಂದಿ ಕ್ಷೇತ್ರಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ ಅವರ ಮೇಲೆ ಹರಿಹಾಯ್ದ ಘಟನೆ ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಶುಕ್ರವಾರ ನಡೆದ ತಾಲೂಕು ಪಂಚಾಯಿತಿ ಸಭೆsಯಲ್ಲಿ ಬಿಇಓ ರುದ್ರಪ್ಪ ಹುರಳಿ ತಮ್ಮ ಇಲಾಖೆಯ ವರದಿ ಸಲ್ಲಿಸುತ್ತಿರುವ ಸಂದರ್ಭದಲ್ಲಿ, ಜಿಪಂ ಸದಸ್ಯ ಆಸಂಗೆಪ್ಪ ನಕ್ಕರಗುಂದಿ ಅವರು 2018-19ರಲ್ಲಿ ಪ್ರವಾಹದಿಂದ ಹಾನಿಗೊಳಗಾದ ತಾಲೂಕಿನ ಶಾಲೆಗಳ ಬಗ್ಗೆ ಮಾಹಿತಿ ಕೇಳಿ, ಪ್ರವಾಹದಿಂದ ಎಷ್ಟು ಶಾಲೆಗಳು ಹಾನಿಗೊಳಗಾಗಿವೆ. ಆ ಬಗ್ಗೆ ಮಾಹಿತಿ ನೀಡಿ ಎಂದಾಗ, ಶಿಕ್ಷಣಾಧಿಕಾರಿಗಳು ಈ ಬಗ್ಗೆ ಮಾಹಿತಿ ತಂದಿಲ್ಲ ಎಂದು ಹೇಳಿದಾಗ ಮಾಹಿತಿ ಇಲ್ಲದೇ ಸಭೆಗೆ ಏಕೆ ಬರುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲ, ಆಸ್ಪತ್ರೆಗೆ ಕಿಟಕಿ, ಬಾಗಿಲುಗಳು ಇಲ್ಲ, ವೈದ್ಯರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ಸದಸ್ಯರು ದೂರಿದಾಗ, ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಎಂ.ಬಿ. ಪಾಟೀಲ ಹೇಳಿ, ಗುಳೇದಗುಡ್ಡ ನಗರಕ್ಕೆ 100 ಹಾಸಿಗೆಯ ಆಸ್ಪತ್ರೆ ಮಂಜೂರಾಗಿದೆ. ಆಸ್ಪತ್ರೆಗೆ ಜಮೀನು ನೀಡುವಂತೆ ಸಭೆಯಲ್ಲಿ ಮನವಿ ಮಾಡಿದರು.
ಮಾತೃಪೂರ್ಣ ಯೋಜನೆಯ ಅಡಿ ತಾಲೂಕಿನ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟಫೋನ್ ನೀಡಲಾಗುತ್ತಿದ್ದು, ಕಾರ್ಯಕರ್ತರು ಮಾಹಿತಿಯನ್ನು ಮೊಬೈಲ್‍ನಲ್ಲಿ ಅಪ್‍ಲೋಡ್ ಅನುಕೂಲವಾಗಲಿದೆ ಎಂದ ಸಿಡಿಪಿಓ ಅನ್ನಪೂರ್ಣ ಕುಬಕಡ್ಡಿ ಮಾಹಿತಿ ನೀಡಿದರು. ತಾಲೂಕಿನ ತೆಗ್ಗಿ, ಕಟಗೇರಿ, ಹಂಗರಗಿ, ರಾಘಾಪುರ ಗ್ರಾಮಗಳ ನಾಲ್ಕು ಅಂಗನವಾಡಿಗಳ ಉನ್ನತೀಕರಣಕ್ಕಾಗಿ ತಲಾ 1 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಕಾಮಗಾರಿ ಇನ್ನೂ ಪ್ರಾರಂಭಗೊಂಡಿಲ್ಲ. ಗುಳೇದಗುಡ್ಡ ನಗರದಲ್ಲಿ ಒಟ್ಟು 38 ಅಂಗನವಾಡಿಗಳು ಇದ್ದು ಇದರಲ್ಲಿ 5 ಅಂಗನವಾಡಿಗಳು ಮಾತ್ರ ಸ್ವಂತಕಟ್ಟಡದಲ್ಲಿ ನಡೆಯುತ್ತಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ತಾಲೂಕಿನ ಹಿಂಗಾರು ಹಂಗಾಮಿಗೆ ಬಿತ್ತನ ಬೀಜಕ್ಕೆ ಕೊರತೆಯಿಲ್ಲ. ಜೋಳ, ಕಡಲೆ, ಗೋಧಿ ಬಿತ್ತನೆಯ ಬೀಜ ದಾಸ್ತಾನು ಸಾಕಷ್ಟು ಇದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ರೈತರು ತಮ್ಮ ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗೆ ಅಳವಡಿಸಿಕೊಳ್ಳಬೇಕು ಎಂದು ಕೃಷಿ ನಿರ್ದೇಶಕ ಎಂ.ಆರ್. ನಾಗೂರ ಹೇಳಿದರು.
ಕಳೆದ ಎರಡ್ಮೂರು ಸಾಮಾನ್ಯ ಸಭೆಗಳಲ್ಲಿ ಏಕೆ ನಿಮ್ಮ ಇಲಾಖೆಯ ಬಗ್ಗೆ ಮಾಹಿತಿ ನೀಡಿಲ್ಲ. ನಿಮ್ಮ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದು ತಾಪಂ ಉಪಾಧ್ಯಕ್ಷ ಯಮನಪ್ಪ ವಡ್ಡರ ಅವರು ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಪಿ.ಎಸ್. ಖೇಡಗಿ ಅವರನ್ನು ತರಾಟೆಗೆ ತೆಗೆದುಕೊಂಡರು. ನಾನು ಕಳೆದ ಎರಡು ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದೇನೆ. ಇನ್ನು ಮುಂದೆ ಈ ರೀತಿ ನಡೆಯದಂತೆ ನೋಡಿಕೊಳ್ಳುತ್ತೇನೆ. ಸಭೆಗೆ ತಪ್ಪದೇ ಹಾಜರಾಗಿ ವರದಿ ಸಲ್ಲಿಸುತ್ತೇನೆ ಎಂದು ಸಮಜಾಯಿಸಿ ನೀಡಿದರು.
ಸಭೆಗೆ ಹಾಜರಾಗದ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ನಕ್ಕರಗುಂದಿ ಸಭೆಯಲ್ಲಿ ಎಚ್ಚರಿಸಿದರು.
ಸಭೆಯ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷೆ ರೇಣುಕಾ ಗಾಜಿ ವಹಿಸಿದ್ದರು, ತಾಪಂ ಉಪಾಧ್ಯಕ್ಷ ಯಮನಪ್ಪ ವಡ್ಡರ, ಸದಸ್ಯರಾದ ಕನಕಪ್ಪ ಬಂದಕೇರಿ, ಹನಮವ್ವ ಮಾದರ, ದೇವಿಕಾ ಪಾದನಕಟ್ಟಿ, ಕೈಲಾಸ ಕುಂಬಾರ ಹಾಗೂ ಇಲಾಖೆಗಳ ಅಧಿಕಾರಿಗಳು ಇದ್ದರು.
ಇದೇ ಸಂದರ್ಭದಲ್ಲಿ ಗುಳೇದಗುಡ್ಡ ತಾಲ್ಲೂಕ ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ರಾಜಶೇಖರ ಶೀಲವಂತ, ಅಶೋಕ ಹೆಗಡಿ, ದೀಪಕ ನೇಮದಿ, ಅವರುಗಳು ತಾ.ಪಂ. ಅಧ್ಯಕ್ಷೆ ರೇಣುಕಾ ಗಾಜಿ ಅವರಿಗೆ ಗುಳೇದಗುಡ್ಡ ತಾಲ್ಲೂಕ ನಕ್ಷೆ ನೀಡಿದರು.