ಮಾಸ್ತಿ ಕಾದಂಬರಿಗಳು ಕನ್ನಡದ ಆಸ್ತಿಯಾಗಲಿ

ಕೋಲಾರ, ಜೂ.೮- “ಮಾಸ್ತಿ ಕನ್ನಡದ ಆಸ್ತಿ” ಎಂದೇ ಪ್ರಖ್ಯಾತರಾದ ಸಣ್ಣ ಕಥೆಗಳ ಜನಕ, ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತರಾದ ಅದರಲ್ಲೂ ಕೋಲಾರ ಜಿಲ್ಲೆಯವರೇ ಆದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಅವರು ಬರೆದಿರುವ ಸಣ್ಣ ಕಥೆಗಳು, ಕಾದಂಬರಿಗಳನ್ನು ಹೆಚ್ಚಾಗಿ ಓದಿ ಅರ್ಥೈಸಿಕೊಂಡು ಅವರಂತೆ ಕನ್ನಡದ ಆಸ್ತಿಯಾಗಬೇಕೆಂದು ನಿವೃತ್ತ ಪ್ರಾಂಶುಪಾಲರಾದ ವಿ.ರುದ್ರಪ್ಪ ಅಭಿಪ್ರಾಯಪಟ್ಟರು.
ನಗರದ ಶುಭಲ ವಿದ್ಯಾಲಯದಲ್ಲಿ ಕೋಲಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಮಾಸ್ತಿ ವೆಂಕಟೇಶ್ ಅಯ್ಯಾಂಗರ್ ೧೩೨ನೇ ಜನ್ಮದಿನಾಚರಣೆಯಲ್ಲಿ ಮಾಸ್ತಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕೋಲಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಟಿ.ಸುಬ್ಬರಾಮ್ಯ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕುವಾರು ಇಂತಹ ಹಲವಾರು ಮಹನೀಯರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನುಡಿದರು.
ಶುಭಲ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಮಹನೀಯರ ಜನ್ಮ ದಿನಾಚರಣೆಗಳನ್ನು ಶಾಲಾ ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಇದರಿಂದ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಬಗ್ಗೆ ಒಲವು ಮೂಡಲು ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಂಚಾಲಕರಾದ ಪಿ.ನಾರಾಯಣಪ್ಪ, ತಾಲ್ಲೂಕು ಪ್ರಧಾನ ಸಂಚಾಲಕರಾದ ವೇಣು ಸುಂದರಗೌಡ, ನಿವೃತ್ತ ಶಿಕ್ಷಕರಾದ ರಾಘವೇಂದ್ರ, ರಾಮಕೃಷ್ಣಪ್ಪ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.