ಶಹಾಪೂರ:ಜೂ.10:ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರವರು ಕನ್ನಡ ಸಾಹಿತ್ಯದ ಪಾಲಿಗೆ ಅತೀ ಅಮುಲ್ಯವಾದ ಆಸ್ತಿಯಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು. ರಂಗಂಪೇಟೆಯ ಬಸವೇಶ್ವರ ಕಾಲೇಜಿನ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ, ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರ ಜನ್ಮದಿನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಶ್ರೀನಿವಾಸ ಎಂಬ ಕಾವ್ಯಾನಾಮದ ಮೂಲಕ ಕನ್ನಡ ಸಾಹಿತ್ಯ ಲೋಕದ ಮನೆ ಮಾತಾಗಿದ್ದಾರೆ ಎಂದರು. ಸಾಹಿತಿ ಡಾ|| ಸುಭಾಷಚಂದ್ರ ಕೌಲಗಿ ಮಾತನಾಡಿ ಮಾಸ್ತಿಯವರು ಸಣ್ಣ ಕಥೆಗಳು, ಕಾವ್ಯ ಸಂಕಲನಗಳು, ಜೀವನ ಚರಿತ್ರೆ, ನಾಟಕ ಪ್ರಬಂಧ ರಚಿಸಿದ್ದಾರೆ. ಜೂನ್-6-1891 ರಂದು ಕೋಲಾರದ ಮಾಲೂರಿನಲ್ಲಿ ಜನಿಸಿದ ಇವರು ಸರಕಾರದಲ್ಲಿ ಅಸಿಸ್ಟೆಂಟ್ ಕಮಿಶನರ್ ಆಗಿ ವೃತ್ತಿ ಜೀವನ ಆರಂಭಿಸಿದರು ಇವರ ಚಿಕ್ಕವಿರ ರಾಜೇಂದ್ರ ಕಾಧÀಂಬರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಸಣ್ಣ ಕಥೆಗಳನ್ನು 5 ಸಂಪುಟಗಳಲ್ಲಿ ಬರೆದ ಇವರು ಅನೇಕ ನಾಟಕ, ಜೀವನ ಚರಿತ್ರೆ, ಪ್ರಬಂಧಗಳನ್ನು ರಚಿಸಿದ್ದಾರೆ ಎಂದು ಹೇಳಿದರು. ಸಂಸ್ಥೆಯ ಮುಖ್ಯಸ್ಥ ಪ್ರಕಾಶ ಅಂಗಡಿ ಕನ್ನೆಳ್ಳಿ, ಕಾಲೇಜಿನ ಪ್ರಾಚಾರ್ಯ ವಿರೇಶ ಹಳಿಮನಿ, ಪರಿಷತ್ತಿನ ಪ್ರಮುಖರಾದ ಚನ್ನಪ್ಪ ಠಾಣಾಗುಂದಿ, ನುರುಂದಪ್ಪ ಲೆವಡಿ, ದೇವರಾಜ ವರಕನಳ್ಳಿ, ಕಾಲೇಜಿನ ಉಪನ್ಯಾಸಕರಾದ ಬಲಭೀಮ ಪಾಟೀಲ್, ರುದ್ರಪ್ಪ ಕೆಂಭಾವಿ, ಶೃತಿ ಹಿರೇಮಠ, ಮೇಘಾ ರಂಗಂಪೇಟ, ಪ್ರವೀಣ ಜಕಾತಿ ಸೇರಿದಂತೆ ಇತರರಿದ್ದರು.