ಮಾಸ್ತಿ ಕನ್ನಡಕ್ಕೆ ಅಮೂಲ್ಯ ಆಸ್ತಿ

ಕಲಬುರಗಿ:ನ.7: ವಿಶ್ವದ ಪ್ರಮುಖ ಭಾಷೆಗಳಲ್ಲಿ ಸ್ಥಾನ ಪಡೆಯುವಲ್ಲಿ ಶ್ರಮಿಸಿದ, ಕನ್ನಡ ಭಾಷೆ ಸಾಹಿತ್ಯ, ಕಲೆ, ಸಂಸ್ಕøತಿಗೆ ತಮ್ಮದೇ ಆದ ಅಮೂಲ್ಯವಾದ ಕೊಡುಗೆಯನ್ನು ನೀಡಿ, ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಕನ್ನಡಕ್ಕೆ ಅಮೂಲ್ಯ ಆಸ್ತಿಯಾಗಿದ್ದಾರೆಂದು ಸಾ.ಶಿ ಇಲಾಖೆಯ ನಿವೃತ್ತ ಕನ್ನಡ ವಿಷಯ ಪರಿವೀಕ್ಷಕ ಎಚ್.ವೀರಭದ್ರಪ್ಪ ಅಭಿಮತ ವ್ಯಕ್ತಪಡಿಸಿದರು. ಹೇಳಿದರು.

ಅವರು ನಗರದ ಗಣೇಶ ನಗರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗುತ್ತಿರುವ ಕನ್ನಡ ರಾಜ್ಯೋತ್ಸವ ಮಾಸಾಚರಣೆ ಪ್ರಯುಕ್ತ ‘ಕನ್ನಡ ತಿಂಗಳು-ಕನ್ನಡದ ಕಣ್ಮಣಿಗಳು’ ಸರಣಿ ಕಾರ್ಯಕ್ರಮ-5ರಲ್ಲಿ ‘ಕನ್ನಡಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರರ ಕೊಡುಗೆ’ ಎಂಬ ವಿಶೇಷ ಉಪನ್ಯಾಸಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

 ಮಾಸ್ತಿಯವರ 'ಕೆಲವು ಸಣ್ಣ ಕಥೆಗಳು' ಎಂಬ ಪ್ರಥಮ ಕೃತಿಯು 1920ರಲ್ಲಿ ಪ್ರಕಟವಾಯಿತು. ಇದು ಆಧುನಿಕ ಕನ್ನಡದ ಸಾಹಿತ್ಯದ ವಿಶಿಷ್ಟವಾದ ಮೊದಲ ಕೃತಿಯೆನಿಸಿದೆ. ಹಾಗೆ ನೋಡಿದರೆ ಸಣ್ಣಕಥೆಯನ್ನು ಮೊದಲು ಬರೆದವರು ಮಾಸ್ತಿಯವರಲ್ಲದೇ ಇದ್ದರೂ ಕೂಡಾ, ಕಥೆಗಳಿಗೆ ಮತ್ತು ಮಾಸ್ತಿಯವರಿಗೆ ಅನೋನ್ಯವಾದ ಬಾಂಧವ್ಯವಿದೆ. ಆದ್ದರಿಂದಲೇ ಇವರು ಕನ್ನಡ ಕಥಾ ಸಾಹಿತ್ಯದ ಪ್ರಮುಖರೆನಿಸಿಕೊಂಡು, 'ಕನ್ನಡದ ಆಸ್ತಿ'ಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ. ಮಾಸ್ತಿಯವರ ಸಣ್ಣ ಕಥೆಗಳ ಭಾಷೆ, ನಿರೂಪಣೆ, ಶೈಲಿ, ಜೀವನದ ನಿಶ್ಚಳ ಅನುಭವಗಳು ತುಂಬಾ ಸರಳವಾಗಿದ್ದು, ಎಂತಹ ಓದುಗರನ್ನು ತನ್ನೊಳಗೆ ಆವರಿಸಿಕೊಳ್ಳುವಂತೆ ಮಾಸ್ತಿಯವರ ಸಾಹಿತ್ಯ ಹೊಂದಿದೆಯೆಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ಕಾಶಿರಾಯ ನಂದೂರಕರ್, ಕುವೆಂಪು ಅವರು ‘ಮಾಸ್ತಿಯವರ ಸಾಹಿತ್ಯ ದೊಡ್ಡದು. ಅವರು ಅದಕ್ಕಿಂತಲೂ ದೊಡ್ಡವರೆಂಬ ನನ್ನ ಭಾವನೆ’ ಎಂದಿರುವ ಮಾತು ಮಾಸ್ತಿಯವರ ಮೇರು ವ್ಯಕ್ತಿತ್ವವನ್ನು ತೋರಿಸುತ್ತದೆ. ಕನ್ನಡ ಸಾಹಿತ್ಯ, ಭಾಷೆಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ನೀಡಿರುವ ಕೊಡುಗೆ ಬಹು ಮೌಲ್ಯಯುತವಾಗಿದೆ. ಅವರೊಬ್ಬ ಕನ್ನಡ ಸಾರಸತ್ವ ಲೋಕದ ಮೇರು ಸಾಹಿತಿಯಾಗಿದ್ದಾರೆಂದು ನುಡಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಎಚ್.ಬಿ.ಪಾಟೀಲ, ಬಸಯ್ಯಸ್ವಾಮಿ ಹೊದಲೂರ, ದೇವೇಂದ್ರಪ್ಪ ಗಣಮುಖಿ, ಎಸ್.ಎಸ್.ಪಾಟೀಲ ಬಡದಾಳ, ಸಿದ್ದಣ್ಣ ಭಾವಿಮನಿ, ಶಿವಪುತ್ರಪ್ಪ ಹಾಗರಗಿ, ರಮೇಶ ಹೆಬ್ಬಾಳ, ಉಮೇಶ ಹೆಬ್ಬಾಳ, ಕಿರಣ ಬೋಳೆವಾಡ ಸೇರಿದಂತೆ ಬಡಾವಣೆಯ ನಾಗರಿಕರು, ಮತ್ತಿತರರು ಭಾಗವಹಿಸಿದ್ದರು.