ಮಾಸ್ಟರ್ ಹಿರಣ್ಣಯ್ಯನವರು ಬಹುಮುಖ ಪ್ರತಿಭೆಯ ಮೇರು ಕಲಾವಿದರು

ಕಲಬುರಗಿ:ಫೆ.15: ಮಾಸ್ಟರ ಹಿರಣ್ಣಯ್ಯನವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ, ಚಿತ್ರ ಸಾಹಿತಿ, ಹಿನ್ನಲೆ ಗಾಯಕ, ರಂಗಕರ್ಮಿಯಾಗಿ ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಕಲಾವಿದರಾಗಿದ್ದರು. ಬಾಲ್ಯದಿಂದಲೇ ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಅವರು, ಸಾಮಾಜಿಕ ಜಾಗೃತಿಯ ನಾಟಕಗಳನ್ನು ರಚಿಸಿ, ನಿರ್ದೇಶನ ಮಾಡುವ ಮೂಲಕ ವಿಶೇಷವಾಗಿ ರಂಗಭೂಮಿಗೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಹಿರಿಯ ರಂಗಭೂಮಿ ಕಲಾವಿದ ಹಣಮಂತರಾಯ ಮಂಗಾಣೆ ಅಭಿಮತಪಟ್ಟರು.
ನಗರದ ಖಾದ್ರಿ ಚೌಕ್‍ನಲ್ಲಿರುವ ಸಕ್ಸಸ್ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಗುರುವಾರ ಜರುಗಿದ ‘ಮಾಸ್ಟರ್ ಹಿರಣ್ಣಯ್ಯನವರ ಜನ್ಮದಿನಾಚರಣೆ’ಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಹಿರಣ್ಣಯ್ಯನವರು ನಟಿಸಿರುವ ಚಿತ್ರಗಳು ವಿದೇಶಗಳಲ್ಲಿಯೂ ಉತ್ತಮ ಪ್ರದರ್ಶನ ಕಂಡಿವೆ. ಅವರು ರಚಿಸಿದ ‘ಲಂಚಾವತಾರ’ ಎಂಬ ನಾಟಕವು 12500ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಕಂಡಿದ್ದು, ಅದು ಲಂಚದಿಂದಾಗಿ ಸಮಾಜದ ಮೇಲಾಗುತ್ತಿರುವ ದುಷ್ಪರಿಣಾಮಗಳು ಮತ್ತು ಜನಜಾಗೃತಿಯನ್ನು ಅದರಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ರಂಗಭೂಮಿ ಸಮಾಜದ ನೈಜ ಪ್ರತಿಬಿಂಬಬಾಗಿದೆ. ಆಧುನಿಕತೆಯ ಇಂದಿನ ದಿನಗಳಲ್ಲಿ ರಂಗಭೂಮಿ ಮತ್ತು ಕಲಾವಿದರು ತೊಂದರೆ ಅನುಭವಿಸುತ್ತಿದ್ದು, ಪ್ರೋತ್ಸಾಹ ನೀಡಬೆಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಬಳಗದ ಉಪನ್ಯಾಸಕ ಹಾಗೂ ಅಧ್ಯಕ್ಷ ಎಚ್.ಬಿ.ಪಾಟೀಲ, ಕಂಪ್ಯೂಟರ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ, ತರಬೇತಿ ಸಂಸ್ಥೆಯ ಸಿಬ್ಬಂದಿಗಳಾದ ಸೈಯದ್ ಹಮೀದ್, ಪ್ರಿಯಾಂಕಾ ದೊಟಿಕೊಳ್ಳ, ಐಶ್ವರ್ಯ ಬಿರಾದಾರ, ಅಂಬಿಕಾ, ಪ್ರಮುಖರಾದ ಮಲ್ಲಿಕಾರ್ಜುನ, ನಾಗೇಶ್, ಪಂಚಖೇಶ್ ಸೇರಿದಂತೆ ಇನ್ನಿತರರಿದ್ದರು.