“ಮಾಸ್ಟರ್ ಸುಂದರಂ ಈಗ ಆಕ್ಟರ್

ಹಿರಿಯ ನಟ ಉಪೇಂದ್ರ ಅಣ್ಣನ ಮಗ ನಿರಂಜನ್ ಸುಧೀಂದ್ರ ನಾಯಕನಾಗಿ ನಟಿಸುತ್ತಿರುವ “ಸೂಪರ್ ಸ್ಟಾರ್” ಚಿತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಸುಂದರಂ ಮಾಸ್ಟರ್ ಅಭಿನಯಿಸಿದ್ದಾರೆ.

86 ರ ವಯಸ್ಸಿನಲ್ಲೂ ಉತ್ಸಾಹದಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ಸುಂದರಂ ಮಾಸ್ಟರ್, ಚಿತ್ರದಲ್ಲೂ ನೃತ್ಯ ನಿರ್ದೇಶಕನ‌ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಅಭಿನಯದ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಿತು. ಇಳಿ ವಯಸ್ಸಿನಲ್ಲೂ ಯಾರಿಗೂ ಕಮ್ಮಿ ಇಲ್ಲದ ಹಾಗೆ ನಟಿಸಿರುವ ಸುಂದರಂ ಮಾಸ್ಟರ್ ಚಿತ್ರೀಕರಣದ ವೇಳೆ ಪಾಲ್ಗೊಂಡ ಕೆಲವು ಸನ್ನಿವೇಶಗಳನ್ನು ಚಿತ್ರತಂಡ ಮೇಕಿಂಗ್ ಟೀಸರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದೆ.

ರಮೇಶ್ ವೆಂಕಟೇಶ್ ಬಾಬು ನಿರ್ದೇಶನದ ಚಿತ್ರದ ಎರಡು ಹಂತಗಳ ಚಿತ್ರೀಕರಣ ‌ಮುಕ್ತಾಯವಾಗಿದೆ.‌ ಮೂರನೇ ಹಂತದ ಚಿತ್ರೀಕರಣ ಸದ್ಯದಲ್ಲೇ ಆರಂಭವಾಗಲಿದೆ.‌

ನಿರಂಜನ್ ಸುಧೀಂದ್ರ ಚಿತ್ರಕ್ಕಾಗಿ ಸಾಕಷ್ಟು ವರ್ಕ್ ಔಟ್ ಮಾಡಿದ್ದಾರೆ. ಜಾರ ಎಸ್ಮಿನ್ ಚಿತ್ರದ ನಾಯಕಿ.ಅಚ್ಯುತ ಕುಮಾರ್, ರಂಗಾಯಣ ರಘು, ದೇವಿಯಾನಿ, ಸುಧಾ ಬೆಳವಾಡಿ, ಅವಿನಾಶ್, ಸೂರಜ್ ಮುಂತಾದವರ ತಾರಾಬಳಗ ಚಿತ್ರದಲ್ಲಿದೆ. ರಾಘವೇಂದ್ರ ವಿ ಸಂಗೀತ ನೀಡುತ್ತಿದ್ದಾರೆ.

ಚೇತನ್ ಕುಮಾರ್ ಹಾಡುಗಳನ್ನು ಬರೆದಿದ್ದಾರೆ. ಯೋಗಿ ಛಾಯಾಗ್ರಹಣ, ವಿಜಯ್ ಕುಮಾರ್ ಸಂಕಲನ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನ ಚಿತ್ರಕ್ಕಿದೆ.