ಮಾಸ್ಕ್ ಹಾಕಿಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ-ಅಧಿಕಾರಿಗಳ ಕಿವಿ ಮಾತು.

ಕೂಡ್ಲಿಗಿ.ಏ.20:- ಮಾಸ್ಕ್ ಹಾಕದವರಿಗೆ ದಂಡ ಹಾಕೋ ಅಧಿಕಾರಿಗಳು ಸಿಗೋ ಒಂದೆರಡು ನಿಮಿಷದಲ್ಲಿ ಮಾಸ್ಕ್ ಹಾಕಿಕೊಳ್ಳಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಜನತೆಗೆ ತಿಳಿಹೇಳಿ ಜಾಗೃತಿ ಮೂಡಿಸುವ ಕಾರ್ಯ ಪಟ್ಟಣದ ಮದಕರಿ ವೃತ್ತದಲ್ಲಿ ಸೋಮವಾರ ಸಂಜೆ ನಡೆಯಿತು. ದೇಶದಲ್ಲಿ ಕೊರೋನಾ ಮಹಾಮಾರಿ ಎರಡನೇ ಅಲೆ ಬಹು ಜೋರಾಗಿ ಮನುಷ್ಯರ ದೇಹಕ್ಕೆ ಲಗ್ಗೆ ಹಾಕುತ್ತಿದ್ದು ಇದರಿಂದ ಕಾಪಾಡಿಕೊಳ್ಳಲು ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಕೈಗಳನ್ನು ಸ್ಯಾನಿಟೈಸರ್ ಅಥವಾ ಸೋಪಿನಿಂದ ಆಗಾಗ ಕೈತೊಳೆಯುವ ಮೂಲಕ ಇದರ ನಿಯಂತ್ರಣ ಸಾಧ್ಯವಾಗಲಿದೆ ಎಂದು ಸರ್ಕಾರ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಓಡಾಡುವಂತೆ ಸಂಬಂದಿಸಿದ ಇಲಾಖೆಯಿಂದ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ತಿಳಿಸುತಿದ್ದು ಜನರು ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾಗ ತಪ್ಪದೆ ಮಾಸ್ಕ್ ಹಾಕಿಕೊಳ್ಳುವಂತೆ ಕೂಡ್ಲಿಗಿ ತಹಸೀಲ್ದಾರ್ ಮಹಾಬಲೇಶ್ವರ ಬೀದಿಗಿಳಿದು ಜನತೆಗೆ ಆರೋಗ್ಯದ ಅರಿವು ಮೂಡಿಸುತ್ತಿದ್ದಾರೆ.
ಕೂಡ್ಲಿಗಿ ಸಿಪಿಐ ವಸಂತ ವಿ ಅಸೋದೆ ಮತ್ತು ಕೂಡ್ಲಿಗಿ ಪಿಎಸ್ಐ ಸುರೇಶ ಮಾತನಾಡಿ ಸರ್ಕಾರವು ಕೋವಿಡ್ ನಿಯಮ ಪಾಲಿಸದ ಹಾಗೂ ಮಾಸ್ಕ್ ಹಾಕದೆ ಓಡಾಡುವವರಿಗೆ ದಂಡ ವಿಧಿಸುವುದು ಸ್ವಾರ್ಥಕ್ಕಲ್ಲ ಮಾಸ್ಕ್ ಹಾಕಿಕೊಂಡು ಓಡಾಡಿದರೆ ಕೊರೋನಾ ವೈರೆಸ್ ಗಳು ಹರಡದೆ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ ದಂಡ ಕಟ್ಟುವುದಕ್ಕಿಂದ ನಿಮ್ಮ ಆರೋಗ್ಯದ ಕಡೆ ಕಾಳಜಿವಹಿಸಿಕೊಂಡು ಮಾಸ್ಕ್ ಹಾಕಿಕೊಳ್ಳಿ ಸರ್ಕಾರದ ಕಟ್ಟುನಿಟ್ಟಿನ ಕ್ರಮ ಜರುಗಿಸಿರುವುದು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಎಂದು ಎಲ್ಲರೂ ಅರಿತುಕೊಳ್ಳಬೇಕು ಎಂದು ಮಾಸ್ಕ್ ಹಾಕದೆ ದಂಡ ಕಟ್ಟುವ ಯುವಕರಿಗೆ ಹಾಗೂ ಇತರರಿಗೆ ಕಿವಿ ಮಾತು ಹೇಳಿದರು. ಈ ಸಂಧರ್ಭದಲ್ಲಿ ಕೂಡ್ಲಿಗಿ ಸಾರಿಗೆ ಸಂಸ್ಥೆ ಘಟಕದ ಸಂಚಾರಿ ನಿರೀಕ್ಷಕ ಉಮಾಮಹೇಶ, ಪ್ರೋಭೇಷನರಿ ಪಿಎಸ್ಐ ಮಣಿಕಂಠ ಹಾಗೂ ಕೂಡ್ಲಿಗಿ ಪೊಲೀಸ್ ಠಾಣಾ ಸಿಬ್ಬಂದಿ ಇದ್ದರು.