ಮಾಸ್ಕ್ ಹಾಕದವರ ವಿರುದ್ಧ ಮಾರ್ಷಲ್‌ಗಳ ಕ್ರಮ

ಬೆಂಗಳೂರು,ನ.೨೮- ಓಮಿಕ್ರಾನ್ ಕೊರೊನಾ ಹೊಸ ರೂಪಾಂತರಿ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ನಮ್ಮ ಮೆಟ್ರೊ ನಿಗಮ ಎಚ್ಚರಿಕೆ ವಹಿಸಿದೆ. ಬೆಂಗಳೂರು ನಗರದಲ್ಲಿ ಜನರಿಗೆ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಲು ಬಿಬಿಎಂಪಿ ಮಾರ್ಷಲ್‌ಗಳು ರಸ್ತೆಗಿಳಿದಿದ್ದು, ಮಾಸ್ಕ್ ಧರಿಸದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.
ಮೆಟ್ರೊ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಯಾವುದೇ ಕಾರಣಕ್ಕೂ ಮಾಸ್ಕ್ ಇಲ್ಲದೆ ಬರುವ ಪ್ರಯಾಣಿಕರಿಗೆ ಪ್ರವೇಶವಿಲ್ಲ. ಇಂದಿನಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ರೂಪಾಂತರಿ ಸೋಂಕು ಅತ್ಯಂತ ವೇಗವಾಗಿ ಹರಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ಸಂದೇಶ ರವಾನಿಸಿದ ಬೆನ್ನಲ್ಲೆ ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕು ಇಳಿಕೆ ಕಂಡ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಜನರು ಮಾಸ್ಕ್, ಸಾಮಾಜಿಕ ಅಂತರ ಮರೆತಿದ್ದರು. ಈಗ ಬಿಬಿಎಂಪಿ ಮಾರ್ಷಲ್‌ಗಳು ಈಗ ಮತ್ತೆ ಅಖಾಡಕ್ಕಿಳಿದಿದ್ದು, ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸಿದ್ದಾರೆ.
ನಗರದ ಪ್ರಮುಖ ಪ್ರದೇಶಗಳಾದ ಕೆಆರ್ ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರ, ಮೆಜೆಸ್ಟಿಕ್, ಇನ್ನಿತರ ಕಡೆಗಳಲ್ಲಿ ಮಾರ್ಷಲ್‌ಗಳು ಬೆಳಿಗ್ಗೆಯಿಂದಲೇ ರಸ್ತೆಗಿಳಿದು ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಗೆ ದಂಡ ಹಾಕಲು ಮುಂದಾದರು. ಇದರಿಂದ ಎಚ್ಚೆತ್ತುಕೊಂಡ ಕೆಲವರು ಮಾಸ್ಕ್ ಧರಿಸಲು ಮುಂದಾಗಿದ್ದಾರೆ.
ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದ ಇಬ್ಬರು ವ್ಯಕ್ತಿಗಳಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಲರ್ಟ್ ಆಗಿದ್ದು, ಎಲ್ಲೆಡೆ ಕಠಿಣಕ್ರಮ ಕೈಗೊಳ್ಳಲು ಮುಂದಾಗಿದೆ.
ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಇಬ್ಬರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ. ಈ ಇಬ್ಬರು ತಂಗಿದ್ದ ಖಾಸಗಿ ಹೋಟೆಲ್‌ನ ಎಲ್ಲ ಸಿಬ್ಬಂದಿಗಳನ್ನು ಕಠಿಣ ಪರೀಕ್ಷೆಗೆ ಒಳಪಡಿಸಲಾಗಿದೆ.