ಮಾಸ್ಕ್ ವಿತರಿಸಿ ಶಿವಮೊಗ್ಗ ಪೊಲೀಸರಿಂದ ವಿಭಿನ್ನ ಜಾಗೃತಿ

ಶಿವಮೊಗ್ಗ, ಎ. 20: ಮಾಸ್ಕ್ ಧರಿಸದೇ ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಕರೋನಾ ವಿರುದ್ಧ ಜನಜಾಗೃತಿ ಮೂಡಿಸಿದ ಶಿವಮೊಗ್ಗ ಪೊಲೀಸರ ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಡಾ.ಹೆಚ್.ಟಿ.ಶೇಖರ್ ಅವರ ನೇತೃತ್ವದ ತಂಡ ಶಿವಮೊಗ್ಗ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಮಾಸ್ಕ್ ಧರಿಸದೇ ಇದ್ದವರಿಗೆ ನಯವಾಗಿಯೇ ತಿಳುವಳಿಕೆ ಹೇಳಿ ಉಚಿತವಾಗಿ ಮಾಸ್ಕ್ ವಿತರಿಸಿ ಧರಿಸಲು ಸೂಚಿಸಿದರು. ಪೊಲೀಸರನ್ನು ಕಂಡೊಡನೆ ಬಾಯಿಗೆ ಬಟ್ಟೆ ಸುತ್ತಿಕೊಂಡ ವ್ಯಕ್ತಿಯೊಬ್ಬರಿಗೆ `ನೀವು ಈಗ ಬಟ್ಟೆ ಸುತ್ತಿಕೊಂಡು ನಮ್ಮಿಂದ ತಪ್ಪಿಸಿಕೊಳ್ಳಬಹುದು ಆದರೆ ಕರೋನಾದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ` ಎಂದು ತಿಳುವಳಿಕೆ ನೀಡಿದರು.ಮಾಸ್ಕ್ ಇಲ್ಲದೆ ನಡೆಯುತ್ತಿದ್ದ ಕುಟುಂಬದ ಸದಸ್ಯರಿಗೆ ಮಾಸ್ಕ್ ವಿತರಿಸಿದ ಅವರು ಮಕ್ಕಳಿಗೆ ಸ್ವತಃ ಮಾಸ್ಕ್ ತೊಡಿಸಿ ಕರೋನಾದ ಬಗ್ಗೆ ನಿರ್ಲಕ್ಷ್ಯ ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ಎಚ್ಚರಿಕೆ ನೀಡಿದರು. ನಿಲ್ದಾಣದಲ್ಲಿದ್ದ ಬಸ್‍ಗಳಿಗೆ ಹತ್ತಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ತಿಳುವಳಿಕೆ ನೀಡಿದರು. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಬಗ್ಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಲಾಗುತ್ತಿದೆ. ಮಾಸ್ಕ್ ಧರಿಸದವರಿಂದ ದಂಡ ವಿಧಿಸಲಾಗುತ್ತಿದೆ. ಭಾನುವಾರ ಮಾಸ್ಕ್ ಧರಿಸದ 1146 ಪ್ರಕರಣಗಳನ್ನು ಗುರುತಿಸಿ 1.48 ಲಕ್ಷ ದಂಡ ವಸೂಲು ಮಾಡಲಾಗಿದೆ. ಚಾಲಕರಿಗೆ ಸ್ಯಾನಿಟೈಸರ್ ನೀಡಿ, ಪ್ರತಿಯೊಬ್ಬ ಪ್ರಯಾಣಿಕ ಇದನ್ನು ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.