ಮಾಸ್ಕ್ ಧರಿಸಿ, ಅಂತರ ಪಾಲಿಸಿ-ರೂಪ

ಕೋಲಾರ,ಏ.೨೬; ಕೋವಿಡ್ ಗ್ರಾಮೀಣ ಪ್ರದೇಶದಲ್ಲೂ ವ್ಯಾಪಕವಾರಿ ಹರಡುತ್ತಿದ್ದು, ಜನತೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಾಲ್ಲೂಕಿನ ನಾಗಲಾಪುರ ಗ್ರಾಮ ಪಂಚಾಯಿತಿ ಸದಸ್ಯೆ ಎಸ್.ಎಂ.ರೂಪ ಕರೆ ನೀಡಿದರು.
ಗ್ರಾಮದಲ್ಲಿ ನಿನ್ನೆ ಸಂಜೆ ಗ್ರಾಮದ ಎಲ್ಲಾ ಜನತೆಗೂ ಮಾಸ್ಕ್ ವಿತರಿಸಿ, ಕೋವಿಡ್ ಜಾಗೃತಿ ಮೂಡಿಸಿ ಅವರು ಮಾತನಾಡಿ, ಕೋವಿಡ್ ಮಾರಿಗೆ ಹಳ್ಳಿ,ನಗರವೆಂಬ ಬೇಧವಿಲ್ಲ, ಬಡವರು,ಶ್ರೀಮಂತರು ಎಂಬ ತಾರತಮ್ಯವೂ ಇಲ್ಲ, ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು ಎಂದರು.
ಕೋವಿಡ್ ೨ನೇ ಅಲೆ ಕೋಲಾರ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ, ಅನೇಕ ಗ್ರಾಮಗಳಲ್ಲಿ ವ್ಯಾಪಿಸಿ ಗ್ರಾಮೀಣ ಜನತೆಯಲ್ಲಿ ಆತಂಕ ಸೃಷ್ಟಿಸಿದೆ ಎಂದ ಅವರು ನೀವು ಎಚ್ಚರ ತಪ್ಪಿದರೆ ತೊಂದರೆಗೆ ಒಳಗಾಗುತ್ತೀರಿ ಎಂದು ತಿಳಿಸಿದರು.
ವಿನಾಕಾರಣ ನಗರಗಳಿಗೆ ಹೋಗದಂತೆ ಸಲಹೆ ನೀಡಿದ ಅವರು, ಸೋಂಕು ತಡೆಯಲು ಅದಷ್ಟು ಗ್ರಾಮದಲ್ಲೇ ಉಳಿದುಕೊಳ್ಳಿ, ಗ್ರಾಮದಾದ್ಯಂತ ಸ್ವಚ್ಚತೆಗೆ ಒತ್ತು ನೀಡೋಣ, ಶುದ್ದ ಕುಡಿಯುವ ನೀರು ಸೇವಿಸೋಣ, ಮಾಸ್ಕ್ ಧರಿಸಿ ಕೋವಿಡ್ ಮಾರಿಯಿಂದ ರಕ್ಷಣೆ ಪಡೆಯೋಣ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಖಜಾಂಚಿ ವಿಜಯ್, ಮುಖಂಡರಾದ ಮುನಿಕೃಷ್ಣ, ಶ್ರೀನಿವಾಸ್, ಗಜೇಂದ್ರ, ರಾಜೇಶ್, ಶ್ರೀಧರ್,ಕೆಂಪರಾಜು, ಮುರಳಿ, ಅರ್ಜುನ್, ಪ್ರಸಾದ್ ಮುಂತಾದವರಿದ್ದರು.