ಮಾಸ್ಕ್ ಧರಿಸದ 30 ಮಂದಿಗೆ ದಂಡ

ಬೀದರ:ಎ.23: ತಾಲ್ಲೂಕಿನ ಮನ್ನಳ್ಳಿ ಗ್ರಾಮ ಪಂಚಾಯಿತಿಯು ಕೋವಿಡ್ ಸೋಂಕು ತಡೆಗೆ ಮುಂದಾಗಿದೆ.

ಚುನಾಯಿತ ಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರ ಸಲಹೆ ಆಧರಿಸಿ, ಕೋವಿಡ್ ಸೋಂಕಿನ ಜಾಗೃತಿ, ನಿಯಮಗಳ ಪಾಲನೆಗೆ ಅಂಗಡಿಗಳಿಗೆ ನೋಟಿಸ್, ಮಾಸ್ಕ್ ಧರಿಸದವರಿಗೆ ದಂಡ ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಪಂಚಾಯಿತಿ ಅಧ್ಯಕ್ಷ ಅಲ್ಲಾವುದ್ದಿನ್ ಮೈನೊದ್ದಿನ್, ಸದಸ್ಯ ರಾಜಕುಮಾರ ಮಡಕಿ, ಹಣಮಂತ ವೀರಣ್ಣ, ಅಭಿವೃದ್ಧಿ ಅಧಿಕಾರಿ ಸವಿತಾ ಹಿರೇಮಠ ಹಾಗೂ ಸಿಬ್ಬಂದಿ ಪೊಲೀಸ್ ಸಿಬ್ಬಂದಿಯೊಂದಿಗೆ ಗುರುವಾರ ಮನ್ನಳ್ಳಿ ಗ್ರಾಮದಲ್ಲಿ ಸಂಚರಿಸಿ ಕೋವಿಡ್ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ವಾಹನ ಸವಾರರು, ಸಾರ್ವಜನಿಕರು ಸೇರಿ ಮಾಸ್ಕ್ ಧರಿಸದ ಒಟ್ಟು 30 ಮಂದಿಗೆ ತಲಾ ₹100 ದಂಡ ವಿಧಿಸಿದರು.ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕಿರಾಣಿ, ಹೋಟೆಲ್, ಬಟ್ಟೆ ಅಂಗಡಿ ಸೇರಿದಂತೆ 25 ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿದರು.
ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಸಾರ್ವಜನಿಕರು ಹೆಚ್ಚು ಜಾಗೃತಿ ವಹಿಸುವ ಅಗತ್ಯ ಇದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸವಿತಾ ಹಿರೇಮಠ ಹೇಳಿದರು.

ಕೋವಿಡ್ ಸೋಂಕು ನಿಯಂತ್ರಣ ಸಂಬಂಧ ಪಂಚಾಯಿತಿಯಲ್ಲಿ ಚುನಾಯಿತ ಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರ ಸಭೆ ನಡೆಸಲಾಗಿದೆ. ಅದರಲ್ಲಿ ಬಂದ ಸಲಹೆಗಳ ಮೇರೆಗೆ ಸೋಂಕಿನ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಾಸ್ಕ್ ಧರಿಸದವ ರಿಗೆ ದಂಡ ವಿಧಿಸುವ ಪ್ರಕ್ರಿಯೆ ಮುಂದು ವರಿಯಲಿದೆ ಎಂದು ತಿಳಿಸಿದರು.