ಮಾಸ್ಕ್ ಧರಿಸದಿದ್ರೇ ದಂಡ:ಸ್ವತಃ ಫಿಲ್ಡಿಗಿಳಿದ ಡಿಸಿ

ಬಳ್ಳಾರಿ, ಏ.17: ಬಳ್ಳಾರಿಯಲ್ಲಿ ಇಂದು ಸಂಜೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಎಸಿ,ತಹಸೀಲ್ದಾರ್ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಯೊಡಗೂಡಿ ಸ್ವತಃ ಫಿಲ್ಡಿಗಿಳಿದರು.

ನಗರದ ಬೆಂಗಳೂರು ರಸ್ತೆ ಸೇರಿದಂತೆ ಸಂಪೂರ್ಣ ಮಾರ್ಕೆಟ್ ಅನ್ನು ಸುತ್ತಾಡಿ ಮಾಸ್ಕ್ ಧರಿಸದ ಜನರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಅನೇಕರಿಗೆ ದಂಡ ವಿಧಿಸಿದರು.
ಕೋವಿಡ್ ನಿಯಮಾವಳಿಗಳ ಉಲ್ಲಂಘನೆ ಆಧಾರದ ಮೇರೆಗೆ 2 ಅಂಗಡಿಗಳ ಮಾಲೀಕರಿಗೆ ಶೋಕಾಸ್ ನೋಟಿಸ್ ಕೂಡ ಇದೇ ಸಂದರ್ಭದಲ್ಲಿ ಜಾರಿ ಮಾಡಿದರು.
ಜಿಲ್ಲೆಯಲ್ಲಿ ಕೋವಿಡ್ ಸೊಂಕಿನ ಪ್ರಮಾಣ ದಿನೇದಿನೇ‌ ಹೆಚ್ಚಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಪಾಲನೆ ಹಾಗೂ ಸ್ಯಾನಿಟೈಸರ್ ಬಳಕೆ ಅತ್ಯಂತ ಅನಿವಾರ್ಯವಾಗಿದೆ. ಆದ್ರೂ ಜನರು ಇದರ ಗಂಭೀರತೆಯನ್ನು ಅರಿವು ಮಾಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನ ‌ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಗಣನೀಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೇ ಓಡಾಡುವವರಿಗೆ ಜಿಲ್ಲಾಡಳಿತ ದಂಡ ಪ್ರಯೋಗಕ್ಕೆ ಮುಂದಾಗಿದೆ ಎಂದರು.

ಕಳೆದ ಹತ್ತು ದಿನಗಳಿಂದ ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ತೀವ್ರ ಸ್ವರೂಪ ಪಡೆದಿದೆ. ಪ್ರತಿ ನಿತ್ಯ ನಡೆಸುವ ಕೋವಿಡ್ 19 ಪರೀಕ್ಷೆಯಲ್ಲಿ ಶೇ 0.5 ರಿಂದ ಶೇ 5ರಷ್ಟು ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿವೆ. ವಿಶೇಷವಾಗಿ ಬಳ್ಳಾರಿ ನಗರದಲ್ಲಿ ಪ್ರಕರಣಗಳು ಹೆಚ್ಚಿವೆ. ಬಳ್ಳಾರಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ಧರಿಸದೇ ಸಂಚರಿಸುವವರಿಗೆ ದಂಡ ವಿಧಿಸಲು ಅಧಿಕಾರಿಗಳ ತಂಡ ರಚಿಸಿ ಆದೇಶಿಸಲಾಗಿದೆ.
ನಗರದ ರಾಯಲ್ ಸರ್ಕಲ್, ಎಸ್.ಎನ್.ಪೇಟೆ, ಬೆಂಗಳೂರು ರಸ್ತೆ ಸೇರಿದಂತೆ ಒಟ್ಟು 20ಸ್ಥಳಗಳಲ್ಲಿ ಪ್ರತಿಯೊಂದು ಸ್ಥಳಕ್ಕೆ ತಲಾ ಒಬ್ಬ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.ಪ್ರತಿ ದಿನ ಆ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರು ಮಾಸ್ಕ್ ಧರಿಸಿದೇ ಓಡಾಡುತ್ತಿದ್ದಲ್ಲಿ 250 ರೂ. ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ 100 ರೂ. ದಂಡ ವಿಧಿಸುವಂತೆ ಸೂಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಸೀಲ್ದಾರ್ ರೆಹಮಾನ್ ಪಾಶಾ, ಮಹಾನಗರ ಪಾಲಿಕೆಯ ಸಿಬ್ಬಂದಿ ಇದ್ದರು.