ಮಾಸ್ಕ್ ಧರಿಸದಿದ್ದರೇ ದಂಡ: ಜಿಲ್ಲಾಧಿಕಾರಿ ಎಚ್ಚರಿಕೆ

*ರಾಯಚೂರು ನಗರದಲ್ಲಿ ೫೦೦, ಸಿಂಧನೂರು-೩೦೦, ಗ್ರಾಮಗಳಲ್ಲಿ ೨೫ ರೂ.ದಂಡ
ರಾಯಚೂರು,ಮಾ.೨೩- ಜಿಲ್ಲೆಯಲ್ಲಿ ಕೊರೋನಾ ಎರಡನೇ ಅಲೆ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಇಲ್ಲದಿದ್ದಲ್ಲೀ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅವರು ಮಾ.೨೨ರ ಸೋಮವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಕೊರೋನಾ ವ್ಯಾಕ್ಸಿನ್‌ಗೆ ಸಂಬಂಧಿಸಿದಂತೆ ತಹಶೀಲ್ದಾರರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿಡಿಯೋ ಸಂವಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಜನರನ್ನು ಕೊರೋನಾ ಸೋಂಕಿನಿಂದ ರಕ್ಷಿಸಲು ಸರ್ಕಾರ ಹಲವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ, ಮಾಸ್ಕ್ ಧರಿಸುವಿಕೆ, ಪರಸ್ಪರ ಸಾಮಾಜಿಕ ಅಂತರ, ಸ್ಯಾನಿಟೈಷನ್ ಹಾಗೂ ಇತರೆ ಸ್ರತ್ರಗಳನ್ನು ಪಾಲಿಸಬೇಕು, ಕೊರೋನಾ ಎರಡನೇ ಅಲೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಜಿಲ್ಲೆಯ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಹಕರಿಸಬೇಕು, ಮಾಸ್ಕ್ ಧರಿಸದೇ ಹೊರಬಂದಲ್ಲಿ ದಂಡ ವಿಧಿಸಲಾಗುವುದು ಎಂದು ಅವರು ತಿಳಿಸಿದರು.
ಮಾಸ್ಕ್ ಧರಿಸದೇ ಹೊರಬಂದಲ್ಲೀ ರಾಯಚೂರು ನಗರಸಭೆ ವ್ಯಾಪ್ತಿಯಲ್ಲಿ ೫೦೦ ರೂ.ಗಳು, ಸಿಂಧನೂರು ನಗರಸಭೆ ವ್ಯಾಪ್ತಿಯಲ್ಲಿ ೩೦೦ ರೂ.ಗಳು, ಪುರಸಭೆಗಳ ವ್ಯಾಪ್ತಿಯಲ್ಲಿ ೨೦೦ ರೂ.ಗಳು, ಪಟ್ಟಣ ಪಂಚಾಯತ್‌ಗಳಲ್ಲಿ ೧೦೦ ರೂ.ಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ೨೫ ರೂ.ಗಳ ದಂಡ ವಿಧಿಸುವಂತೆ ನಗರಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಈಗಾಗಲೇ ದೇಶ ಹಾಗೂ ರಾಜ್ಯದಲ್ಲಿ ಕೋವಿಡ್-೧೯ ಎರಡನೇ ಅಲೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬಾರದು, ಸಂತೆ, ಜಾತ್ರೆಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರದಂತೆ ನಿಗಾವಹಿಸಬೇಕು, ಜಿಲ್ಲೆಯಲ್ಲಿ ೪೫ ರಿಂದ ೫೯ ವರ್ಷ ಹಾಗೂ ೬೦ ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆಯಲು ಹೆಚ್ಚಿನ ಜಾಗೃತಿ ಮೂಡಿಸಬೇಕು, ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ, ಜಿಲ್ಲಾ, ತಾಲೂಕು ಆರೋಗ್ಯ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕೆಂದರು. ಪ್ರತಿದಿನ ಕನಿಷ್ಠ ೧೦೦ ಮಂದಿಗೆ ಕೋವಿಡ್ ತಪಾಸಣೆ ನಡೆಸಬೇಕು, ಲಸಿಕೆ ಪಡೆಯುವ ಮುನ್ನಾ ಕಡ್ಡಾಯವಾಗಿ ಆನ್‌ಲೈನ್ ಮೂಲಕ ಸಂಬಂಧಿಸಿದವರ ಹೆಸರು ನೋಂದಾವಣಿಯಾಗಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಮಾತನಾಡಿ, ಕೋವಿಡ್ ಲಸಿಕೆ ಪಡೆಯುವವರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅನುಕೂಲವಾಗುವಂತೆ ಸಿಂಧನೂರು-೧೦, ರಾಯಚೂರು ೬, ಮಾನ್ವಿ ೨, ದೇವದುರ್ಗ ೨ ಮತ್ತು ಸಿರವಾರ ತಾಲೂಕುಗಳಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದರು.
ಸರ್ಕಾರದ ಮಾರ್ಗಸೂಚಿ ಪ್ರಕಾರ ಕೋವಿಡ್-೧೯ ಎರಡನೇ ಅಲೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲು ಸಾರ್ವಜನಿಕರಿಗೆ ಅರಿವು ಮೂಡಿಸಲು ತಾಲೂಕು ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಮಿತಿ ಸಭೆ ನಡೆಸಬೇಕು, ಸಭೆ ನಡೆಸದ ಮಾನ್ವಿ, ಸಿಂಧನೂರು, ಲಿಂಗಸೂಗೂರು ಮತ್ತು ರಾಯಚೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಎಂದು ಹೇಳಿದರು.
ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳ ಸಭೆ ನಡೆಸಿ ಆಯಾ ಗ್ರಾಮ ಪಂಚಾಯತ್‌ಗಳಲ್ಲಿ ೫೦ ವರ್ಷದಿಂದ ೬೦ ವರ್ಷ ಮೇಲ್ಪಟ್ಟವರ ಮನವೋಲಿಸಿ ಕಡ್ಡಾಯ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಸಭೆ ನಡೆಸದ ಕಾರಣ ಜಿಲ್ಲೆಯ ನಾಲ್ಕು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೋಟಿಸ್ ಜಾರಿಮಾಡಲಾಗುವುದು, ಮುಂದಿನ ೪೮ ಗಂಟೆಗಳಲ್ಲಿ ಸಭೆ ನಡೆಸಿ, ವರದಿ ಸಲ್ಲಿಸದಿದ್ದಲ್ಲೀ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದವರು ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ, ರಾಯಚೂರು ತಹಶೀಲ್ದಾರ ಡಾ.ಹಂಪಣ್ಣ, ಆರ್‌ಸಿಹೆಚ್‌ಓ
ಡಾ.ಕೆ. ವಿಜಯಾ, ಡಾ.ಸುರೇಂದ್ರ ಬಾಬು, ಸಿಎಂಸಿ ಪೌರಾಯುಕ್ತ ವೆಂಕಟೇಶ, ಡಾ.ಕೆ. ನಾಗರಾಜ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.