ಮಾಸ್ಕ್ ಧರಿಸದವರಿಗೆ 250 ರೂ.ದಂಡ

ಕಲಬುರಗಿ,ಮಾ.19-ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಆಯುಕ್ತ ಎನ್.ಸತೀಷಕುಮಾರ ಮತ್ತು ಜಿಲ್ಲಾಧಿಕಾರಿ‌ ವಿ.ವಿ.ಜ್ಯೋತ್ಸ್ನಾ ಅವರು ಇಂದು ಜಗತ್ ವೃತ್ತದಲ್ಲಿ ಮಾಸ್ಕ್ ಕುರಿತು ಜಾಗೃತಿ ಮತ್ತು ತಪಾಸಣೆ ನಡೆಸಿದರು.
ಜಗತ್ ವೃತ್ತದಲ್ಲಿ ಸಾರಿಗೆ ಸಂಸ್ಥೆ ಬಸ್ ಒಳಗೆ ಪ್ರವೇಶಿಸಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಮತ್ತು ಪೊಲೀಸ್ ಆಯುಕ್ತ ಎನ್.ಸತೀಷಕುಮಾರ ಅವರು ಪ್ರಯಾಣಿಕರಿಗೆ ಮಾಸ್ಕ್ ಕುರಿತು ಅರಿವು ಮೂಡಿಸಿದರಲ್ಲದೆ, ಮಾಸ್ಕ್ ಇಲ್ಲದೆ ಪ್ರಯಾಣಿಸುತ್ತಿದ್ದವರಿಗೆ ಮಾಸ್ಕ್ ವಿತರಿಸಿದರು. ಅಲ್ಲದೆ ಮಾಸ್ಕ್ ಧರಿಸದ ಕೆಲವೊಬ್ಬರಿಗೆ 250 ರೂ.ದಂಡ ಸಹ ಹಾಕಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ಜಗತ್ ವೃತ್ತದಲ್ಲಿ ಮಗಳು ಮತ್ತು ಹಸುಗೂಸಿನೊಂದಿಗೆ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದ ಮಹಿಳೆಯ ಬಳಿ ತೆರಳಿ ಅವರಿಗೆ ಮಾಸ್ಕ್ ವಿತರಿಸಿದರು. ಮಹಿಳೆ ಮಾಸ್ಕ್ ಧರಿಸುವವರೆಗೆ ಮಗುವನ್ನು ಎತ್ತಿಕೊಂಡರು. ಜಿಲ್ಲಾಧಿಕಾರಿಗಳ ಈ ಸರಳ ನಡೆಯನ್ನು ಅಲ್ಲಿದ್ದವರು ಗುಣಗಾನ ಮಾಡಿದರು. ಇದಲ್ಲದೆ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಬೈಕ್ ಸವಾರರನ್ನು ತಡೆದು ದಂಡ ವಿಧಿಸಿ ಮಾಸ್ಕ್ ಧರಿಸಿ ಓಡಾಡುವಂತೆ ತಾಕೀತು ಮಾಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚನೆ ನೀಡಿದರು. ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.