ಮಾಸ್ಕ್ ಧರಿಸದವರಿಗೆ ದಂಡ

ಕೆ.ಆರ್.ಪುರಂ, ಏ.೨೫- ವಾರಾಂತ್ಯದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾನುವಾರ ನಿಗದಿತ ಸಮಯಕ್ಕೆ ಅಂಗಡಿ ಬಾಗಿಲು ಮುಚ್ಚದವರಿಗೆ ಮತ್ತು ಮಾಸ್ಕ್ ಹಾಕದವರಿಗೆ ಕೆ.ಆರ್.ಪುರಂನಲ್ಲಿ ಪೊಲೀಸರು ದಂಡ ವಿಧಿಸಿದರು.

ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂವನ್ನು ವಿಧಿಸಲಾಗಿದ್ದು, ಇಂದು ಎರಡನೇ ದಿನ ಭಾನುವಾರ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಬೆಳಿಗೆ ೬ ರಿಂದ ೧೦ ಗಂಟೆವರೆಗೆ ವ್ಯಾಪಾರಕ್ಕೆ ಅನುಮತಿ ನೀಡಲಾಯಿತು. ನಿಗದಿತ ಸಮಯದ ನಂತರವೂ ಅಂಗಡಿಗಳನ್ನು ತೆರೆದಿದ್ದವರಿಗೆ ಮತ್ತು ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಅಂಗಡಿ ಮಾಲೀಕರಿಗೆ ಹಾಗೂ ಸರಿಯಾಗಿ ಮಾಸ್ಕ್ ಧರಿಸದವರಿಗೆ ಕೆ.ಆರ್. ಪುರಂನ ಪೊಲೀಸರು ದಂಡ ಹಾಕುವ ಮೂಲಕ ಬಿಸಿಮುಟ್ಟಿಸಿದರು.

ಬೆಂಗಳೂರು ಹೊರವಲಯದ ಕೆ.ಆರ್. ಪುರಂನ ಕುಂಬಾರ ಬೀದಿ ಹಾಗೂ ಮಾರುಕಟ್ಟೆ ರಸ್ತೆ , ಬಸವನಪುರ ಮುಖ್ಯರಸ್ತೆಯಲ್ಲಿ ೧೦ ಗಂಟೆ ಬಳಿಕವೂ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳನ್ನು ಕೆ.ಆರ್. ಪುರಂನ ಪೋಲಿಸರು ಬಂದ್ ಮಾಡಿಸಿದರು. ಜೊತೆಗೆ ಖರೀದಿಗೆ ಬರುವ ಗ್ರಾಹಕರು ಮಾಸ್ಕ್ ಧರಿಸದೆ ರಸ್ತೆಯಲ್ಲಿ ಹಾಗೂ ಅಂಗಡಿಗಳ ಮುಂದೆ ಗುಂಪುಗುಂಪಾಗಿ ಸೇರಿ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡದವರಿಗೆ ಪೋಲಿಸರು ದಂಡವನ್ನು ವಿಧಿಸಿದ್ದಾರೆ. ರಸ್ತೆಯಲ್ಲಿ ಸುಖಾಸುಮ್ಮನೆ ಓಡಾಡಿದವರಿಗೆ ವಾರ್ನಿಂಗ್ ನೀಡಿದರು.