ಮಾಸ್ಕ್ ಧರಿಸದವರಿಗೆ ದಂಡ ಮತ್ತು ಉಚಿತ ಮಾಸ್ಕ್

ಕೆ.ಆರ್.ಪೇಟೆ:ಮೇ:03: ಮಹಾಮಾರಿ ಕೊರೋನಾ ಗ್ರಾಮೀಣ ಪ್ರದೇಶಕ್ಕೂ ಕಾಲಿರಿಸಿ ದಿನದಿಂದ ದಿನಕ್ಕೆ ತನ್ನ ಜಾಲವನ್ನು ವಿಸ್ತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನರು ಜಾಗೃತರಾಗಿ ಮಹಾಮಾರಿಯನ್ನು ನಿಯಂತ್ರಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದು ಬಲ್ಲೇನಹಳ್ಳಿ ಪಿಡಿಓ ಹರ್ಷವರ್ಧನ ತಿಳಿಸಿದರು.
ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಲ್ಲೇನಹಳ್ಳಿ ಗ್ರಾಮದಲ್ಲಿ ಕಾರ್ಯಾಚರಣೆ ಕೈಗೊಂಡು ಮಾಸ್ಕ್ ಧರಿಸದೇ ಇದ್ದ ಸುಮಾರು 50 ಜನರಿಗೆ ತಲಾ 100 ರೂಪಾಯಿಗಳ ದಂಡ ವಿಧಿಸಿ ಅವರುಗಳಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಮಾತನಾಡಿದರು.
ಬಲ್ಲೇನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಹೋಂ ಐಸೋಲೇಷನ್ ನಲ್ಲಿ ಇರುವವರ ಮನೆಗಳಿಗೆ ಸ್ಯಾನಿಟೈಸ್ ಮಾಡಿ ಸಾರ್ವಜನಿಕರಿಗೆ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಮನವರಿಕೆ ಮಾಡಿದರು.
ಇದೇ ಸಂದರ್ಭದಲ್ಲಿ ಗ್ರಾಪಂ ಉಪಾದ್ಯಕ್ಷ ಬಿ.ಎಸ್.ನಂದೀಶ್, ಗ್ರಾಪಂ ಸದಸ್ಯರಾದ ಚಂದ್ರಶೇಖರ್, ಆಶಾ ಕಾರ್ಯಕರ್ತೆ ಮಂಜುಳ, ವರಲಕ್ಷ್ಮಿ, ಬಿಲ್ ಕಲಕ್ಟರ್ ರವಿ, ಮತ್ತು ರವೀಶ ಮತ್ತು ವಾಟರ್‍ಮ್ಯಾನ್ ರಾಮೇಗೌಡ ಸೇರಿದಂತೆ ಹಲವರು ಹಾಜರಿದ್ದರು.