ಮಾಸ್ಕ್ ಜಾಗೃತಿ: ಸ್ವತಃ ಫೀಲ್ಡಿಗಿಳಿದ ಎಸ್ಪಿ

ರಾಯಚೂರು,ಏ.೨೦- ಕೊರೋನಾ ಎರಡನೇ ಅಲೆ ಕಾರಣ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲು ಹಾಗೂ ಮಾಸ್ಕ್ ಧರಿಸದೇ ರಸ್ತೆ ಮೇಲೆ ಸಂಚರಿಸುವವರಿಗೆ ದಂಢ ವಿಧಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ಅವರೇ ಸ್ವತಃ ಫೀಲ್ಡ್‌ಗಿಳಿದಿದ್ದರು.
ಏ.೧೯ರ ಸೋಮವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಎಸ್ಪಿಯವರು ಮಾಸ್ಕ್ ಧರಿಸದೇ ವಿವಿಧ ವಾಹನಗಳಲ್ಲಿ ಸಂಚರಿಸುತ್ತಿದ್ದವರಿಗೆ ಮಾಸ್ಕ್ ಧರಿಸಲೇ ಬೇಕು, ಇಲ್ಲದಿದ್ದರೆ ಕೊರೋನಾ ಸೋಂಕು ಹತ್ತುವುದು ತಿಳಿಯುವುದಿಲ್ಲ, ಸಾಧ್ಯವಾದಷ್ಟು ಎಚ್ಚರಿಕೆಯಿಂದಲೇ ಇರಬೇಕು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು ಎಂಬುದನ್ನು ತಿಳಿಸಿಕೊಟ್ಟರು.
ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಸ್ವತಃ ಎಸ್ಪಿಯವರೇ ಮಾಸ್ಕ್ ವಿತರಿಸಿ, ಕೊರೋನಾ ಸೋಂಕು ತಮಗೂ ಹಾಗೂ ತಮ್ಮೊಂದಿಗೆ ಪ್ರಯಾಣಿಸುತ್ತಿರುವವರಿಗೂ ಹರಡದಂತೆ ಮುನ್ನೇಚ್ಚರಿಕಾ ಕ್ರಮವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ತಿಳಿ ಹೇಳಿದರು.
ಇದೇ ಸಂದರ್ಭದಲ್ಲಿ ದ್ವಿ ಚಕ್ರ ಹಾಗೂ ಆಟೋ, ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರು, ಲಾರಿ ಚಾಲಕರು, ಮುಖಗವಸು ಧರಿಸುವಂತೆ ಅರಿವು ಮೂಡಿಸಿದರು.
ಮಾಸ್ಕ್ ಧರಿಸದೇ ವಾಹನಗಳಲ್ಲಿ ಪರಾರಿಯಾಗುತ್ತಿದ್ದವರನ್ನು ತಡೆ ಹಿಡಿದು ೨೫೦ ರೂ.ಗಳ ದಂಡ ವಿಧಿಸಲಾಗುತ್ತಿತ್ತು.
ಅಪರ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು, ಡೈವೈಎಸ್ಪಿ ಶಿವನಗೌಡ ನಾಯಕ್, ಇನ್ಸ್‌ಪೆಕ್ಟರ್‌ಗಳಾದ ಮಲ್ಲಮ್ಮ ಚೌಬೆ, ಮಂಜುನಾಥ್, ಹಾಗೂ ಇತರರಿದ್ದರು.
ಕಡ್ಡಾಯವಾಗಿ ಮಾಸ್ಕ್ ಧರಿಸಿ: ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ, ಪೊಲೀಸ್ ಇಲಾಖೆ ವತಿಯಿಂದ ಕೋವಿಡ್ ಸೋಂಕಿನ ಜಾಗೃತಿ ಮೂಡಿಸಲಾಗುತ್ತಿದೆ, ಮಾಸ್ಕ್ ಧರಿಸದವರಿಗೆ ದಂಡವನ್ನು ವಿಧಿಸಲಾಗುತ್ತಿದೆ, ರಾಯಚೂರಿನ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಹೊರಬರಬೇಕು, ಈ ಬಗ್ಗೆ ಕಳಕಳಿಯಿಂದ ಮನವಿ ಮಾಡಲಾಗುತ್ತಿದೆ, ದಿನ ದಿನವೂ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು, ಅವುಗಳಲ್ಲಿ ಮಾಸ್ಕ್ ಧಾರಣೆಯೂ ಒಂದಾಗಿದ್ದು, ಮುಖ ಗವಸು ಧರಿಸದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ, ನಿನ್ನೆಯೂ ೪೮೦ ಪ್ರಕರಣ ದಾಖಲಾಗಿದೆ, ಅದರಂತೆ ಇಂದೂ ಕೂಡ ಕಾರ್ಯಾಚರಣೆ ನಡೆದಿದೆ, ರಾಯಚೂರಿನಲ್ಲಿ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಕೋವಿಡ್ ನಿಯಮಾವಳಿ ಪಾಲಿಸದಿದ್ದಲ್ಲೀ ಗರಿಷ್ಠ ೧೦ ಸಾವಿರ ರೂ.ಗಳ ದಂಡ ವಿಧಿಸಬಹುದಾಗಿದೆ, ದಂಡ ವಿಧಿಸುವ ಕಾರ್ಯಾಚರಣೆಯನ್ನು ನಿಯಮಿತವಾಗಿ ಪ್ರತಿ ದಿನವೂ ಕೈಗೊಳ್ಳಲಾಗುವುದು ಆದ್ದರಿಂದ ಸಾರ್ವಜನಿಕರು ತಮ್ಮ ಹಾಗೂ ತಮ್ಮ ಪರಿಸರದವರ ಆರೋಗ್ಯ ಹಿತದರಷ್ಟಿಯಿಂದ ಮನೆಯಿಂದ ಹೊರಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಬರುವಂತೆ ಮನವಿ ಮಾಡಿದರು.