ಮಾಸ್ಕ್ ಕಡ್ಡಾಯದ ಗೊಂದಲ ಆರೋಗ್ಯ ಇಲಾಖೆಗೆ ಪಾಲಿಕೆ ಪತ್ರ


ಬೆಂಗಳೂರು, ಅ.೩೦-ವಾಹನ ಸವಾರರಿಗೆ ಮಾಸ್ಕ್ ಕಡ್ಡಾಯದ ಗೊಂದಲಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡುವಂತೆ ಕೋರಿ ಸರ್ಕಾರದ ಆರೋಗ್ಯ ಇಲಾಖೆಗೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದಾರೆ.ರಾಜ್ಯ ಸರ್ಕಾರದ ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆಗಳ ಆಧಾರ ಮೇರೆಗೆ ಬಿಬಿಎಂಪಿಯು ಮಾಸ್ಕ್ ಧರಿಸುವ ವಿಚಾರವಾಗಿ ಪರಿಷ್ಕೃತ ಮಾರ್ಗಸೂಚಿಯೊಂದನ್ನು ಪ್ರಕಟಿಸಿತ್ತು.
ಆದರೆ, ಇದರಲ್ಲಿ ವಾಹನ ಸವಾರರಿಗೆ ಮಾಸ್ಕ್ ಕಡ್ಡಾಯದ ಬಗ್ಗೆ ಗೊಂದಲ ಉಂಟಾಗಿರುವ ಕಾರಣ ಈ ಪತ್ರ ಬರೆಯಲಾಗಿದೆ.ವಾಹನಗಳಲ್ಲಿ ಗಾಜುಗಳನ್ನು ಮುಚ್ಚಿಕೊಂಡು ಒಬ್ಬರೇ ಪ್ರಯಾಣಿಸುವಾಗಲೂ ಮಾಸ್ಕ್ ಕಡ್ಡಾಯ ಹಾಗೂ ದ್ವಿಚಕ್ರ ವಾಹನ ಸವಾರರು ಒಬ್ಬರೇ ಇದ್ದಾಗಲೂ ಮಾಸ್ಕ್ ಕಡ್ಡಾಯ ಎಂದಿದ್ದ ಬಿಬಿಎಂಪಿ ನಿಯಮಕ್ಕೆ ಟೀಕೆಗಳು ವ್ಯಕ್ತವಾಗಿದ್ದವು.ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು, ಮಾರ್ಗಸೂಚಿ ಪ್ರಕಾರ ತಿನ್ನುವಾಗ, ಕುಡಿಯುವಾಗ, ಸಂಗೀತವಾದ್ಯ ನುಡಿಸುವಾಗ, ಮುಖ ಒದ್ದೆಯಾಗುವಂತಹ ಚಟುವಟಿಕೆ ವೇಳೆ (ಈಜುವುದು), ಹಲ್ಲು-ವೈದ್ಯಕೀಯ ತಪಾಸಣೆ ವೇಳೆ, ಕಾನೂನು ಪಾಲನೆಗೆ ಗುರುತು ಪತ್ತೆಗೆ ತಪಾಸಣೆ ನಡೆಸಬೇಕಾದಾಗ, ೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ, ಮಾಸ್ಕ್ ಧರಿಸುವಿಕೆಯಿಂದ ವಿನಾಯಿತಿ ನೀಡಲಾಗಿರುವುದು ಸಹ ಟೀಕೆಗೆ ಕಾರಣವಾಗಿದೆ.