ಮಾಸ್ಕ್ ಇಲ್ಲದವರಿಗೆ ದಂಡ ವಸೂಲಿ

ದೇವದುರ್ಗ.ಏ.೨೨-ಮಹಾಮಾರಿ ಕರೊನಾ ಎರಡನೇ ಅಲೆ ಎಲ್ಲೆಡೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಜಾಗೃತಿ ಮೂಡಿಸಲು ಹಾಗೂ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸುತ್ತಿದ್ದು, ಅಧಿಕಾರಿಗಳು ದಂಡ ವಿಧಿಸುವ ಶಿಕ್ಷೆ ನೀಡುತ್ತಿದ್ದಾರೆ.
ಬರೀ ಬಾಯಿ ಮಾತಿನಲ್ಲಿ ಹೇಳಿದರೆ ಜನರು ಕೇಳುತ್ತಿಲ್ಲ.
ಮಾಸ್ಕ್ ಎಂದರೆ ಉಡಾಫೆ ಮಾಡುತ್ತಿದ್ದು, ಅಧಿಕಾರಿಗಳಿಗೆ ತಲೆ ನೋವಿಗೆ ಕಾರಣವಾಗಿದೆ. ಪುರಸಭೆ ಕಸ ವಿಲೇವಾರಿ ವಾಹನದಲ್ಲಿ ಸಿಬ್ಬಂದಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿದರೂ ಸಾರ್ವಜನಿಕರು ಕ್ಯಾರೆ ಎನ್ನುತ್ತಿಲ್ಲ. ದಂಡಂ ದಶಗುಣಂ ಎನ್ನುವಂತೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ಕೊಡುತ್ತಿದ್ದಾರೆ.
ಪಟ್ಟಣದಲ್ಲ ಬೆಳ್ಳಂಬೆಳಗ್ಗೆ ಫಿಲ್ಡಿಗೆ ಇಳಿದ ತಹಸೀಲ್ದಾರ್ ಮಧುರಾಜ್ ಯಾಳಗಿ, ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಹಾಗೂ ಪೊಲೀಸ್ ಅಧಿಕಾರಿಗಳು ವಿವಿಧೆಡೆ ದಾಳಿ ನಡೆಸಿ, ಮಾಸ್ಕ್ ಹಾಕದ ಹಾಗೂ ಕರೊನಾ ನಿಯಮ ಪಾಲನೆ ಮಾಡದ ಜನರಿಗೆ ದಂಡ ಹಾಕಿ ಎಚ್ಚರಿಸಿದರು.
ಇಲ್ಲಿನ ಮಿನಿವಿಧಾನಸೌಧ ಮುಂಭಾಗ, ಕೋರ್ಟ್ ರಸ್ತೆ ಸೇರಿ ವಿವಿಧೆಡೆ ದಂಡ ವಸೂಲಿ ಮಾಡಲಾಯಿತು. ಮಾಸ್ಕ್ ಹಾಕದವರಿಗೆ ೧೦೦ರೂ. ದಂಡ ಹಾಕಿ, ರಸೀದಿ ನೀಡಲಾಯಿತು. ಬೈಕ್ ಸವಾರರು, ವಾಹನ ಚಾಲಕರಿಗೆ ದಂಡ ವಿಧಿಸಲಾಯಿತು. ಕಳೆದ ಮೂರು ದಿನಗಳಿಂದ ಪುರಸಭೆ ವ್ಯಾಪ್ತಿಯಲ್ಲಿ ದಂಡ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಈ ವರೆಗೆ ಸುಮಾರು ೧೦೦ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಿದ್ದು, ಸುಮಾರು ೧೦ಸಾವಿರ ರೂ.ಗೂ ಅಧಿಕ ವಸೂಲಿ ಮಾಡಲಾಗಿದೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳದಿದ್ದರೆ, ಕರೊನಾ ನಿಯಮ ಪಾಲಿಸಿದ್ದಿದ್ದರೆ ದಂಡ ಹಾಕುವ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದರು.
ಪಾರ್ಸಲ್‌ಗೆ ಅವಕಾಶ: ಅಂಗಡಿ, ಹೋಟೆಲ್, ಖಾನಾವಳಿ ಸೇರಿ ವಿವಿಧೆಡೆ ಮಾಲೀಕರಿಗೆ ಕರೊನಾ ನಿಯಮ ಪಾಲಿಸಲು ಎಚ್ಚರಿಕೆ ನೀಡಿ, ಪಾರ್ಸ್‌ಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ತಳ್ಳುವ ಬಂಡಿಯಿಂದ ಹಿಡಿದು ಎಲ್ಲ ದೊಡ್ಡ ದೊಡ್ಡ ಹೋಟೆಲ್‌ಗಳಿಗೂ ಕೇವಲ ಪಾರ್ಸಲ್ ನೀಡಲು ಸೂಚಿಸಲಾಗಿದೆ. ಅಲ್ಲದೆ ಬೆಳಗ್ಗೆ ೬ರಿಂದ ರಾತ್ರಿ ೯ರವರೆಗೆ ಮಾತ್ರ ತೆರೆಯಲು ಅವಕಾಶ ನೀಡಿದ್ದು, ರಾತ್ರಿ ನೈಟ್ ಕರ್ಫೂ ವಿಧಿಸಲಾಗಿದೆ.