
ಮಾಸ್ಕೋ, ಆ.೨೩- ಇತ್ತೀಚಿಗಿನ ದಿನಗಳಲ್ಲಿ ರಷ್ಯಾ ಮೇಲೆ ಡ್ರೋನ್ ದಾಳಿಯ ಪ್ರಮಾಣ ನಡೆಯುತ್ತಿದ್ದು, ಇದೀಗ ಮತ್ತೆ ಮುಂದುವರೆದಿದೆ. ಕೇಂದ್ರ ಮಾಸ್ಕೋದ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ ಎಂದು ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ. ಕಳೆದ ಹಲವು ದಿನಗಳಲ್ಲಿ ಇದು ಮಾಸ್ಕೋ ಮೇಲೆ ನಡೆದ ಆರನೇ ಡ್ರೋನ್ ದಾಳಿಯಾಗಿದೆ ಎನ್ನಲಾಗಿದೆ.
ಮಾಸ್ಕೋ ಪ್ರದೇಶದ ಮೊಝೈಸ್ಕ್ ಮತ್ತು ಖಿಮ್ಕಿ ಜಿಲ್ಲೆಗಳಲ್ಲಿ ವಾಯು ರಕ್ಷಣಾ ವ್ಯವಸ್ಥೆಯು ಎರಡು ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಮಾಸ್ಕೋ ಸಿಟಿ ಕಾಂಪ್ಲೆಕ್ಸ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಅಪ್ಪಳಿಸಿದ ಡ್ರೋನ್ ಅನ್ನು ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳ ಮೂಲಕ ನಿಗ್ರಹಿಸಲಾಗಿದೆ. ಬಳಿಕ ಡ್ರೋನ್ ನಿಯಂತ್ರಣಕ್ಕೆ ಕಳೆದುಕೊಂಡು ನಿರ್ಮಾಣ ಹಂತದ ಕಟ್ಟಡಕ್ಕೆ ಅಪ್ಪಳಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಘಟನೆ ಹಿನ್ನೆಲೆಯಲ್ಲಿ ಐದು ಅಂತಸ್ತಿನ ಎರಡು ಕಟ್ಟಡಗಳ ಹಲವು ಕಿಟಕಿಗಳ ಗಾಜು ಒಡೆದು ಹೋಗಿದೆ. ದಾಳಿಯ ಬಗ್ಗೆ ಈತನಕ ಯಾರೂ ಹೊಣೆ ಹೊತ್ತುಕೊಂಡಿಲ್ಲವಾದರೂ ಇದು ಉಕ್ರೇನ್‌ನ ಕೃತ್ಯವೆಂದು ರಷ್ಯಾ ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ ಸಾಮಾನ್ಯವಾಗಿ ರಷ್ಯಾದ ಭೂಪ್ರದೇಶದೊಳಗಿನ ದಾಳಿಯ ಬಗ್ಗೆ ಉಕ್ರೇನ್ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದರಂತೆ ಈ ಬಾರಿ ಕೂಡ ಅದು ಮೌನಕ್ಕೆ ಶರಣಾಗಿದೆ. ಇನ್ನು ಡ್ರೋನ್ ದಾಳಿ ಹಿನ್ನೆಲೆಯಲ್ಲಿ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಘಟನೆಯಲ್ಲಿ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ ಮತ್ತು ಯಾರು ದಾಳಿ ನಡೆಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.