ಮಾಸಿಕ ಶಿವಾನುಭವ ಚಿಂತನ

ಕೆಂಭಾವಿ:ಜ.2:ಭೌತಿಕ ಬದುಕಿಗೆ ಆಧ್ಯಾತ್ಮಕ ಅರಿವು ಬಹುಮುಖ್ಯ. ಸಂಪತ್ತು, ಗಳಿಕೆಯೊಂದೆ ಮನುಷ್ಯನ ಗುರಿಯಲ್ಲ. ಸಂಪತ್ತಿನ ಜತೆಗೆ ಜ್ಞಾನ, ಗುರುಧ್ಯಾನ ಸಂಪಾದಿಸಿಕೊಂಡು ಬಾಳಬೇಕು ಎಂದು ಕರಡಕಲ್ ಶ್ರೀ ಮಠದ ಶಾಂತರುದ್ರಮುನಿ ಸ್ವಾಮಿಜಿ ಅಭಿಪ್ರಾಯಪಟ್ಟರು.

ಪಟ್ಟಣ ಸಮೀಪದ ಕರಡಕಲ್ ಕೋರಿಸಿದ್ದೇಶ್ವರ ಶಾಖಾ ಮಹಾಮಠದಲ್ಲಿ ನಡೆದ 237ನೇ ಮಾಸಿಕ ಶಿವಾನುಭವ ಚಿಂತನ ಗೋಷ್ಠಿಯ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು.

ಧರ್ಮದಲ್ಲಿ ನಿಷ್ಠೆ, ದೇವರಲ್ಲಿ ಶ್ರದ್ಧೆ, ಗುರುವಿನಲ್ಲಿ ಭಕ್ತಿ ಇರಬೇಕು. ಅಶಾಂತಿಯಿಂದ ತತ್ತರಿಸುತ್ತಿರುವ ಜೀವಾತ್ಮಕ್ಕೆ ಮಾನಸಿಕ ಶಾಂತಿ ಬಲು ಮುಖ್ಯ. ಧರ್ಮದ ಅರಿವು ಇಲ್ಲದೆ ಇದ್ದರೆ ಬಾಳಿನಲ್ಲಿ ಉತ್ಕರ್ಷತೆ ಕಾಣಲು ಸಾಧ್ಯವಾಗದು. ಪ್ರತಿಯೊಬ್ಬರಿಗೂ ಗುರಿ ಮತ್ತು ಗುರು ಇದ್ದರೆ ಬದುಕಿನಲ್ಲಿ ಉನ್ನತ ಕಾಣಲು ಸಾಧ್ಯವಾಗುತ್ತದೆ ಎಂದರು.

ಮುದನೂರ ಸಿದ್ದಚನ್ನ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಸಾಗರವೆಂಬ ಜೀವನ ಪ್ರಯಾಣದಲ್ಲಿ ಧರ್ಮವೆಂಬ ದಿಕ್ಸೂಚಿಯ ತಳಹದಿಯ ಮೇಲೆ ಬದುಕು ಸಾಗಿಸಿದಾಗ ಮಾತ್ರ ಜೀವನ ಸಾರ್ಥಕವಾಗುವುದು ಎಂದು ಹೇಳಿದರು.

ಕಾರ್ಯಕ್ರಮದ ಸಮ್ಮುಖವನ್ನು ಬೂದಿಹಾಳ ಶ್ರದ್ಧಾನಂದ ಮಠದ ಗಂಗೈಪಿತ ಶರಣರು ವಹಿಸಿದ್ದರು. ಶಾಂತಗೌಡ ಮೇಟಿ, ಡಾ.ಎಸ್.ಎಮ್.ನಂದಗಿರಿ, ಶಂಕರಯ್ಯ ಬಪ್ಪರಗಿ, ರಮೇಶ ಶಿರವಾಳ, ನಾಗಣ್ಣ ರಾಜಾಪುರ ಸೇರಿದಂತೆ ಉಪಸ್ಥಿತರಿದ್ದರು.

ಶಾಂತಗೌಡ ಮಾಲಿಪಾಟೀಲ್, ಬಸನಗೌಡ ಪಾಟೀಲ್, ಯಮನೂರ ಹೆಗ್ಗನದೊಡ್ಡಿ ಸಂಗೀತ ಸೇವೆಯನ್ನು ನೇರವೇರಿಸಿದರು. ಶ್ರೀಮಠದ ವಕ್ತಾರ ಶಿವಪ್ರಕಾಶ ಸ್ವಾಮಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಪರಸನಹಳ್ಳಿ ನಿರೂಪಿಸಿದರು. ವಿರತಯ್ಯ ಕಡದರಾಳ ವಂದಿಸಿದರು.