ಮಾಸಿಕ ಶಿವಾನುಭವ ಚಿಂತನ-ಮಂಥನ

ಕೆಂಭಾವಿ:ಸೆ.24:ಬಿಡುವಿಲ್ಲದ ಜೀವನಕ್ಕೆ ಶಿವಾನುಭವ ಕಾರ್ಯಕ್ರಮಗಳು ಆಧ್ಯಾತ್ಮದ ಬೆಳಕನ್ನು ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಸಾಹಿತಿ ಶಿಕ್ಷಕ ಶಿವರುದ್ರಪ್ಪ ಬೋಮ್ಮನಹಳ್ಳಿ ಹೇಳಿದರು.

ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಚಿಂತನ-ಮಂಥನ ಹಾಗೂ ಗುರು ಪುಟ್ಟರಾಜ ಗವಾಯಿಗಳ 11ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಾನವನ ಬದುಕು ನ್ಯೂಸ್ ಪೇಪರ್ ಆಗಬೇಕು ಹೊರತು ರದ್ದಿ ಪೇಪರ್ ಆಗಬಾರದು. ಗುರುವಿನಲ್ಲಿ ಭಕ್ತಿ ಹೊಂದಿದರೆ ಸಾಧನೆ ಸುಲಭ. ಭಕ್ತರಲ್ಲಿ ಭಕ್ತಿ ಮೂಡಿಸಿ ಸಂಸ್ಕಾರ ಕಲಿಸುವುದೇ ಶಿವಾನುಭವ ಚಿಂತನ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಷ.ಬ್ರ. ಶ್ರೀ ಚೆನ್ನಬಸವ ಶಿವಾಚಾರ್ಯರು ಮಾತನಾಡಿ, ಮನಸ್ಸಿನ ನಿಯಂತ್ರಣಕ್ಕೆ ಶಿವಾನುಭವ ಚಿಂತನ ಅವಶ್ಯ. ಆರೋಗ್ಯ ಪೂರ್ಣ ಜೀವನಕ್ಕೆ ಎಲ್ಲರೂ ಧ್ಯಾನ, ಯೋಗ, ಸತ್ಸಂಗ ಅಳವಡಿಸಿಕೊಳ್ಳುವುದರ ಜತೆಗೆ ಮಠದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುಣ್ಯ ಪ್ರಾಪ್ತರಾಗಬೇಕು ಎಂದು ಹೇಳಿದರು.

ಇದೇ ವೇಳೆ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಲ್ಲಿಕಾರ್ಜುನ ನಾಗರಾಳ, ಬಂದೇನವಾಜ ವಡಿಕೇರಿ ಅವರನ್ನು ಶ್ರೀ ಮಠದಿಂದ ಸನ್ಮಾನಿಸಲಾಯಿತು. ಸಂಗೀತ ಕಲಾವಿದರಾದ ಯಮುನೇಶ ಯಾಳಗಿ ಮತ್ತು ಶರಣಕುಮಾರ ಯಾಳಗಿ ಬಳಗದವರಿಂದ ಸಂಗೀತ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ನಿಂಗನಗೌಡ ದೇಸಾಯಿ, ಎಸ್ ಬಿ ಅಂಗಡಿ, ನಿಜಗುಣ ಬಡಿಗಢೆ, ಅಭಿಷೇಕ ಪಾಟೀಲ ಸೇರಿದಂತೆ ಇತರರಿದ್ದರು.