ಮಾಶಾಸನಕ್ಕೆ ಆಗ್ರಹಿಸಿ ಮಂಗಳಮುಖಿಯರಿಂದ ಮನವಿ

ಕಲಬುರಗಿ,ನ.10- ರಾಜ್ಯದಲ್ಲಿರುವ ಎಲ್ಲ ಮಂಗಳಮುಖಿಯರಿಗೆ ಮಾಸಿಕ 10 ಸಾವಿರ ರೂ.ಗಳ ಮಾಶಾಸನ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಯ ಮನವಿ ಪತ್ರವನ್ನು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಕೆ.ಭಾಸ್ಕರರಾವ ಅವರಿಗೆ ವೀರ ಕನ್ನಡಿಗರ ಸೇನೆ ಮಹಿಳಾ ಮತ್ತು ಮಂಗಳ ಮುಖಿಯರ ಘಟಕದಿಂದ ಸಲ್ಲಿಸಲಾಯಿತು.
ವೀರ ಕನ್ನಡಿಗರ ಸೇನೆ ಮಹಿಳಾ ಮತ್ತು ಮಂಗಳಮುಖಿಯರ ಘಟಕದ ನಿಯೋಗವು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಗಳನ್ನು ಇಂದು ಭೇಟಿ ಮಾಡಿದ ಮಂಗಳಮುಖಿಯರು ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ಸಮಾಜದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಸಮನಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸರ್ಕಾರ ಮಂಗಳಮುಖಿಯರಿಗೆ ನೆರವು ನೀಡಲು ಮುಂದಾಗಬೇಕು, ಮಂಗಳಮುಖಿಯರು ಅನುಭವಿಸುತ್ತಿರುವ ಸಂಕಷ್ಟದ ಪರಿಹಾರಕ್ಕೆ ವಿವಿಧ ಯೋಜನೆಗಳ ಮಾಶಾಸನದಂತೆ ತಮಗೂ ಪ್ರತ್ಯೇಕ ಯೋಜನೆಯನ್ನು ಜಾರಿ ಮಾಡಬೇಕು ಎಂದು ತಮ್ಮ ಮನವಿಯಲ್ಲಿ ಅವರು ಒತ್ತಾಯಿಸಿದ್ದಾರೆ.
ನಿಯೋಗದಲ್ಲಿ ಸಂಜನಾ ಮಂಗಳಮುಖಿ, ರಾಣಿ ಮಂಗಳಮುಖಿ, ಪೂಜಾ ಮಂಗಳಮುಖಿ ಮತ್ತು ಸೀತಲ್ ಮಂಗಳಮುಖಿ ಹಾಗೂ ವೀರ ಕನ್ನಡಿಗರ ಸೇನೆಯ ಪದಾಧಿಕಾರಿಗಳು ಇದ್ದರು.