ಮಾಶಾಳ ಎಸ್.ಬಿ.ಐ ಬ್ಯಾಂಕ್ ಸಿಬ್ಬಂದಿಗಳ ವಿರುದ್ಧ ರೊಚ್ಚಿಗೆದ್ದ ಗ್ರಾಹಕರು

ಅಫಜಲಪುರ: ಮಾ.13:ತಾಲೂಕಿನ ಮಾಶಾಳ ಗ್ರಾಮದ ಎಸ್.ಬಿ.ಐ ಬ್ಯಾಂಕಿನಲ್ಲಿ ಗ್ರಾಹಕರಿಗೆ ಬ್ಯಾಂಕಿನ ಸಿಬ್ಬಂದಿಗಳು ಸರಿಯಾಗಿ ಸೇವೆ ನೀಡದೆ ಅನಗತ್ಯವಾಗಿ ಇಲ್ಲಸಲ್ಲದ ಕಾಗದ ಪತ್ರಗಳನ್ನು ಕೇಳುತ್ತಾ ಸಾಲ ಪಡೆಯಲು ವರ್ಷವಿಡೀ ಅಲೆಸುತ್ತಿದ್ದಾರೆ ಎಂದು ಗ್ರಾಹಕರು ಸಿಬ್ಬಂದಿಗಳ ವಿರುದ್ಧ ರೊಚ್ಚಿಗೆದ್ದ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ.

ಈ ವೇಳೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಕುಮಾರ ಬಬಲಾದ ಅವರು ಮಾತನಾಡಿ, ದೇಶದಲ್ಲಿ ಅತಿ ದೊಡ್ಡ ಬ್ಯಾಂಕ್ ಶಾಖೆ ಎನಿಸಿಕೊಂಡಿರುವ ಹಾಗೂ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವ ಶಾಖೆ ಎಂದೇ ಗುರುತಿಸಿಕೊಂಡಿದೆ. ಆದರೆ ಮಾಶಾಳ ಗ್ರಾಮದ ಎಸ್.ಬಿ.ಐ ಬ್ಯಾಂಕ್ ಸಿಬ್ಬಂದಿಗಳು ಮಾತ್ರ ಗ್ರಾಹಕ ಸ್ನೇಹಿಯಾಗಿ ವರ್ತಿಸದೆ ಇಲ್ಲಿನ ಗ್ರಾಹಕರಿಗೆ ಮತ್ತು ರೈತರಿಗೆ ಸರಿಯಾದ ಸೇವೆ ನೀಡದೆ ಕಿರಿಕಿರಿ ಉಂಟುಮಾಡಿ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಯಾವುದಾದರೂ ಸಾಲ ಪಡೆಯಲು ಇಲ್ಲಿ ವರ್ಷಗಟ್ಟಲೇ ಕಾಯಬೇಕು. ಹಿಂದಿನ ಬಾಕಿ ಕಟ್ಟಿ ಹೊಸ ಸಾಲ ಪಡೆಯುವ ರೈತರಿಗೆ ಇಲ್ಲಸಲ್ಲದ ಕಾಗದ ಪತ್ರಗಳನ್ನು ಕೇಳುತ್ತಾ ವರ್ಷ ಕಳೆದರೂ ಕೂಡ ಸರಿಯಾಗಿ ಸಾಲ ನೀಡದ ಕಾರಣ ರೈತರು ಮತ್ತು ಗ್ರಾಹಕರು ಪರಿತಪಿಸುವಂತಾಗಿದೆ. ಇಲ್ಲಿನ ಸಿಬ್ಬಂದಿಗಳು ಗ್ರಾಹಕರೊಂದಿಗೆ ಹೇಗೆ ವರ್ತಿಸಬೇಕೆಂದು ಎಸ್.ಬಿ.ಐ ಬ್ಯಾಂಕಿನ ಮೇಲಾಧಿಕಾರಿಗಳು ತಮ್ಮ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಒತ್ತಾಯಿಸಿದರು.

ಜನರಿಗೆ ಸೇವೆ ನೀಡಲೆಂದು ಹಾಗೂ ಗ್ರಾಹಕರಿಂದಲೇ ನಡೆಯುವ ಇಂತಹ ಬ್ಯಾಂಕುಗಳು ರೈತರಿಗೆ ವಿನಾಕಾರಣ ತೊಂದರೆ ನೀಡದೆ ಅವರ ಯಾವುದೇ ಕೆಲಸ ಕಾರ್ಯಗಳನ್ನು ನಿಗದಿತ ಸಮಯದ ಅವಧಿಯೊಳಗೆ ಮಾಡಿಕೊಡಬೇಕು. ಈಗಾಗಲೇ ಇಂತಹ ಘಟನೆಗಳು ಇಲ್ಲಿ ಅನೇಕ ಬಾರಿ ನಡೆದುಹೋಗಿವೆ ಆದರೂ ಕೂಡ ಸಂಬಂಧ ಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಕೂಡಲೇ ಇಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಮೇಲಾಧಿಕಾರಿಗಳು ಸೂಕ್ತ ನಿರ್ದೇಶನ ನೀಡಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವೇಳೆ ಗ್ರಾಮಸ್ಥರು, ರೈತರು, ಗ್ರಾಹಕರು ಅನೇಕರಿದ್ದರು.