
ಬೆಂಗಳೂರು, ಮೇ.೨೬- ರೈತರಿಂದ ನೇರವಾಗಿ ಗ್ರಾಹಕರ ಕೈಗೆ ತಲುಪಿಸಲು ಹಾಪ್‌ಕಾಮ್ಸ್ ಇಂದಿನಿಂದ ಮಾವು ಮತ್ತು ಹಲಸಿನ ಹಣ್ಣುಗಳ ಮೇಳ ಆರಂಭಿಸಿದ್ದು, ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ನಗರದಲ್ಲಿಂದು ಲಾಲ್ ಬಾಗ್ ಸಸ್ಯ ತೋಟದಲ್ಲಿ ಇಂದಿನಿಂದ ಜೂ.೫ರವರೆಗೆ ನಡೆಯುವ ಮೇಳಕ್ಕೆ ಸಚಿವರು ಹಸಿರು ನಿಶಾನೆ ತೋರಿದರು.
ಹಂಗಾಮ ಮುಗಿಯುವವರೆಗೆ ಗ್ರಾಹಕರಿಗೆ ಮಾವು ಮತ್ತು ಹಲಸಿನ ಹಣ್ಣುಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಈ ಬಾರಿ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆ ನಷ್ಟವಾಗಿದ್ದು, ಶೇ.೩೦ ರಷ್ಟು ಮಾತ್ರ ಪಸಲು ಬಂದಿದೆ. ಆದರೂ, ಬಗೆಬಗೆಯ ಮಾವಿನ ಹಣ್ಣು ಮೇಳದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿವೆ.
ಮಾವು ಮೇಳದಲ್ಲಿ ಬಾದಾಮಿ, ಮಲ್ಲಿಕಾ, ರಸಪೂರಿ, ಬೈಗಂಪಲ್ಲಿ, ಸೇಂದೂರ, ತೋತಾಪುರಿ, ದಶಹರಿ, ಮಲಗೋವಾ, ಹಿಮಾಮ್ ಪಸಂದ್, ಕಾಲಾಪಾಡ್, ಕೇಸರ್, ಸಕ್ಕರೆಗುತ್ತಿ ಮಾವಿನ ಹಣ್ಣುಗಳನ್ನು ರೈತರಿಂದ ಹಾಪ್‌ಕಾಮ್ಸ್ ನೇರವಾಗಿ ಖರೀದಿಸಿ ಮಾರಾಟ ಮಾಡುತ್ತಿವೆ.
ಯಾವುದೇ ರಾಸಾಯನಿಕ ಬಳಕೆ ಮಾಡದೇ ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಇಲ್ಲಿ ಮಾರಾಟ ಮಾಡಲಾಗ್ತಿದೆ. ಜೊತೆಗೆ ೭ ಬಗೆಯ ಹಲಸಿನ ಹಣ್ಣುಗಳೂ ದೊರೆಯುತ್ತಿವೆ.
ದರ:ಮಾವಿನ ಹಣ್ಣು ಕೆಜಿಗೆ ೩೨ ರಿಂದ ಶುರುವಾಗಿ ೨೧೫ ರೂಪಾಯಿ ವರೆಗೆ ಇದೆ. ಹಲಸಿನ ಹಣ್ಣು ಕೆಜಿಗೆ ೨೫ ರೂ ನಿಗದಿಯಾಗಿದೆ.ಈ ಮೇಳದಲ್ಲಿ ತೋಟಗಾರಿಕೆ ಇಲಾಖೆ ಶೇ.೧೦ರಷ್ಟು ರಿಯಾಯಿತಿ ದರ ನಿಗದಿ ಮಾಡಿದೆ. ಒಟ್ಟಿನಲ್ಲಿ
ಇಂದಿನಿಂದ ೧೯ ದಿನಗಳ ಕಾಲ ಈ ಮೇಳ ನಡೆಯಲಿದೆ.
ಈ ಸಂದರ್ಭದಲ್ಲಿ ಶಾಸಕ ಉದಯ್ ಗರುಡಾಚಾರ್, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.