ಮಾವು ಪ್ರದರ್ಶನ, ಮಾರಾಟ ಮೇಳಕ್ಕೆ ಚಾಲನೆ

ಬಾಗಲಕೋಟೆ, ಮೇ25: ವಿದ್ಯಾಗಿರಿಯ ಕಾಳಿದಾಸ ಕಲ್ಯಾಣ ಮಂಟಪದ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಮಾವು ಮೇಳಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು ರೈತರಿಂದಲೇ ನೇರವಾಗಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಕೃತಕವಾಗಿ ವಿವಿಧ ರಾಸಾಯನಿಕ ವಸ್ತುಗಳನ್ನು ಬಳಸಿ ಬೇಗ ಮಾಗುವಂತೆ ಮಾಡಿ ಮಾರಾಟದಿಂದ ಆರೋಗ್ಯಕ್ಕೆ ಹಾನಿಯಾಗಿರುವ ಪ್ರಕರಣ ನಡೆದಿದೆ. ಆದರೆ ಈ ಮೇಳದಲ್ಲಿ ರೈತರೇ ತಾವು ಬೆಳೆದ ಮಾವಿನ ಹಣ್ಣನ್ನು ಮಾರುತ್ತಿರುವುದರಿಂದ ಉತ್ತಮ ಗುಣಮಟ್ಟದ ಹಣ್ಣುಗಳಾಗಿವೆ. ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದು, ಮಾವು ಪ್ರಿಯರು ಇದರ ಉಪಯೋಗ ಪಡೆದುಕೊಳ್ಳಲು ತಿಳಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಇಲ್ಲಿ ವಿವಿಧ ಬಗೆಯ ಮಾವುಗಳನ್ನು ಮಾರಾಟಕ್ಕೆ ಇಡಲಾಗಿದೆ. ಇನ್ನು ಕೆಲವು ಬಗೆಯ ಮಾವುಗಳನ್ನು ಜನರ ಅರಿವಿಗೆ ಪ್ರದರ್ಶನಕ್ಕೆ ಇಡಲಾಗಿದೆ. ಮೇಳದಲ್ಲಿ ಬೇರೆ ಜಿಲ್ಲೆಯ ಬೆಳಗಾವಿ, ದಾರವಾಡದಿಂದ ರೈತರು ಮಾರಾಟಕ್ಕೆ ಮಾವುಗಳನ್ನು ತಂದಿದ್ದಾರೆ. ಅಲ್ಲದೇ ಜಿಲ್ಲೆಯ ಮುಧೋಳ, ಜಮಖಂಡಿ, ಬೀಳಗಿ ಹಾಗೂ ಬಾಗಲಕೋಟೆಯ ರೈತರ ಬೆಳೆದ ಮಾವು ಮೇಳದಲ್ಲಿ ಸಿಗುತ್ತವೆ. ಶನಿವಾರ ಮತ್ತು ಭಾನುವಾರ ಕೂಡಾ ನಡೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ವಿಷ್ಣುವರ್ಧನ, ಯುಕೆಪಿ ಮಹಾವ್ಯವಸ್ಥಾಪಕ ರಮೇಶ ಕಳಸದ, ಜಿ.ಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಬಸವರಾಜ ಗೌಡನ್ನವರ, ಗಣೇಶ ಪಟ್ಟಣಶೆಟ್ಟಿ, ಬಸವರಾಜ ಬೇನಾಳ ಸೇರಿದಂತೆ ಇಲಾಖೆಯ ತಾಲೂಕಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಮೇಳದಲ್ಲಿ ಅಪುಸಾ, ಅಲ್ಪೋಸಾ, ಕೊಂಕಣರುಚಿ, ಆರ್ಕಾ ಪುನಿತ, ರತಾ, ಆರ್ಕಾ ಕಿರಣ, ಆರ್ಕಾ ಅರುಣ, ಕೇಸರ, ಮಲ್ಲಿಕಾ ದಶಹರಿ, ಬನೆಶಾನ ಸೇರಿದಂತೆ ಇನ್ನೀತರ ತಳಿಗಳನ್ನು ಇಡಲಾಗಿದೆ. ಅಲ್ಲದೇ ಜಪಾನಿ ದೇಶದ ತಳಿಯಾದ ಮಿಯಾ ಜಾಕಿ ಮಾವಿನ ದರ ರಾಜ್ಯದಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಪ್ರತಿ ಕೆಜಿಗೆ 2 ಲಕ್ಷ ರೂ.ಗಳ ವೆರೆಗೆ ಮಾರಾಟವಾಗುತ್ತಿದೆ. ಈ ಹಣ್ಣು ಆ್ಯಂಟಿ ಎಜಿಂಗ್ ಗುಣ ಹೊಂದಿರುತ್ತದೆ. ಈ ಮಾವುಗೆ ಹೆಚ್ಚಿನ ಬೇಡಿಕೆ ಇದ್ದು, ರೈತರು ಬೆಳೆಯಲು ಮುಂಗಾತ್ತಿದ್ದಾರೆಂದು ರೈತರು ಹೇಳುತ್ತಾರೆ.