ಮಾವಿನ ಹಣ್ಣಿಗಾಗಿ ಹಠ ಮಾಡಿದ ಬಾಲಕಿ‌ ಕೊಂದ ಸೋದರ ಮಾವ

ಲಕ್ನೋ (ಉತ್ತರ ಪ್ರದೇಶ), ಜು.23- ಮಾವಿನ ಹಣ್ಣು ಬೇಕೆಂದು ಪದೇ ಪದೇ ಹಠ ಮಾಡಿದ ಐದು ವರ್ಷದ ಬಾಲಕಿ ಯನ್ನು ‌ಆಕ್ರೋಶಗೊಂಡ ಸೋದರ ಮಾವನೇ ಹತ್ಯೆಗೈದಿರುವ ಹೃದಯ ವಿದ್ರಾವಕ‌ಘಟನೆ ಶಾಮ್ಲಿಯಾ ಖೇಡಾ ಕುರ್ತಾನ್ ಗ್ರಾಮದಲ್ಲಿ ನಡೆದಿದೆ.
ಪದೇ ಪದೇ ಮಾವಿನ ಹಣ್ಣು ಬೇಕೆಂದು ಹಠ ಮಾಡಿದ ಬಾಲಕಿಯಿಂದ ಕೋಪಗೊಂಡ ಮಾವ ಉಮರ್ದೀನ್ ಆಕೆಯ ತಲೆಗೆ ರಾಡ್‌ನಿಂದ ಹೊಡೆದು ಬಳಿಕ ಆಕೆಯ ಕತ್ತು ಸೀಳಿದ್ದಾನೆ. ತೀವ್ರ ರಕ್ತ ಸಾವ್ರದಿಂದ ಬಾಲಕಿ ಸಾವನ್ನಪ್ಪಿದ್ದು, ಬಳಿಕ ಆಕೆಯ ದೇಹವನ್ನು ಗೋಣಿಚೀಲದಲ್ಲಿ ತುಂಬಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕಿ ಕೂಲಿ ಕಾರ್ಮಿಕನ ಮಗಳು ನಿಶಾ ಎಂದು ಗುರುತಿಸಲಾಗಿದೆ. ಕೃತ್ಯ ನಡೆದ ಬಳಿಕ ಬಾಲಕಿ ನಾಪತ್ತೆಯಾಗಿರುವುದು ತಿಳಿದು ಗ್ರಾಮಸ್ಥರೆಲ್ಲರೂ ಆಕೆಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಯೂ ತನಗೇನೂ ಗೊತ್ತಿಲ್ಲದಂತೆ ಗ್ರಾಮಸ್ಥರೊಂದಿಗೆ ಹುಡುಕಾಟದಲ್ಲಿ ತೊಡಗಿದ್ದ. ಆದರೆ ಪೊಲೀಸರು ಸ್ಥಳಕ್ಕೆ ಬಂದಾಗ ಬಾಲಕಿಯ ಸೋದರ ಮಾವನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಅನುಮಾನ ವ್ಯಕ್ತವಾಗುತ್ತಿದ್ದಂತೆ ಆತ ಅಲ್ಲಿಂದ ಓಟಕ್ಕಿತ್ತಿದ್ದಾನೆ.
ತನಿಖೆ ವೇಳೆ ಬಾಲಕಿಯ ಶವ ಆರೋಪಿಯ ಮನೆಯಲ್ಲಿಯೇ ಪತ್ತೆಯಾಗಿದ್ದು, ಆಕೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಪೊಲೀಸರು ರಾತ್ರಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.