ಮಾವಿನ ವಿಧ ವಿಧ ತಿನಿಸುಗಳು

ಮಾವಿನ ಶ್ರೀಖಂಡ್‌: ಉತ್ತರ ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಭಾರತದಲ್ಲಿ ಜನಪ್ರಿಯವಾಗಿರುವ ಶ್ರೀಖಂಡ್‌ನ ರುಚಿ ಮಾವಿನ ಫ್ಲೇವರ್‌ನಲ್ಲಿ ಇನ್ನೂ ರುಚಿಯಾಗಿರುತ್ತದೆ. ಸಿಹಿ ಮಾವಿನ ಹಣ್ಣಿನ ದಪ್ಪ ರಸ, ದಪ್ಪ ಮೊಸರು, ಸಕ್ಕರೆ, ಏಲಕ್ಕಿ ಪುಡಿ ಮತ್ತು ಕೇಸರಿಯನ್ನು ಬ್ಲೆಂಡರ್‌ಗೆ ಹಾಕಿ ನುಣ್ಣಗೆ ಬ್ಲೆಂಡ್‌ ಮಾಡಿ. ಬಳಿಕ ಅದನ್ನು ಸಣ್ಣ ಬೌಲ್‌ಗಳಿಗೆ ಹಾಕಿ ಚಿಲ್‌ ಮಾಡಿ ಸರ್ವ್‌ ಮಾಡಿ.
ಮ್ಯಾಂಗೊ ಲಸ್ಸಿ ಪಾಪ್ಸಿಕಲ್‌: ಸಕ್ಕರೆ ಹಾಕಿದ ದಪ್ಪನೆಯ ಮಾವಿನ ರಸ ಮತ್ತು ದಪ್ಪನೆಯ ಲಸ್ಸಿ ಸಿದ್ಧಗೊಳಿಸಿ. ಈಗ ಪಾಪ್ಸಿಕಲ್‌ ಮೋಲ್ಡ್‌ ಅಥವಾ ಕಪ್‌ಗಳಿಗೆ ಮೊದಲು ಮಾವಿನ ರಸ ಹಾಕಿ ನಂತರ ಲಸ್ಸಿ ಹಾಕಿ. ಇದನ್ನು ಪ್ಲಾಸ್ಟಿಕ್‌ ಹಾಳೆಯಿಂದ ಮುಚ್ಚಿ. ಈ ಹಾಳೆಯ ಮಧ್ಯೆ ಐಸ್‌ಕ್ರೀಮ್‌ ಕಡ್ಡಿ ಚುಚ್ಚಿಟ್ಟು ಐದು ಗಂಟೆಗಳ ಕಾಲ ಫ್ರೀಜರ್‌ನಲ್ಲಿಡಿ. ಬಳಿಕ ಮೌಲ್ಡ್‌ನಿಂದ ಪಾಪ್ಸಿಕಲ್‌ಗಳನ್ನು ತೆಗೆದು ಸವಿಯಿರಿ.
ಮಾವಿನ ಪೇಡಾ: ಒಂದು ಟೇಬಲ್‌ ಸ್ಪೂನ್‌ ತುಪ್ಪ ಬಿಸಿ ಮಾಡಿ ಅದಕ್ಕೆ ಮುಕ್ಕಾಲು ಕಪ್‌ ಹಾಲಿನ ಪುಡಿ, ಮುಕ್ಕಾಲು ಕಪ್‌ ಕಂಡೆನ್ಸ್‌ಡ್‌ ಮಿಲ್ಕ್‌ ಹಾಕಿ ಮಿಕ್ಸ್‌ ಮಾಡಿ. ಈ ಮಿಶ್ರಣವನ್ನು ಬೇರೆ ಪಾತ್ರೆಗೆ ವರ್ಗಾಯಿಸಿ. ಬಳಿಕ ಎರಡು ಚಮಚ ತುಪ್ಪ ಬಿಸಿ ಮಾಡಿ ಅದಕ್ಕೆ ಮಾವಿನ ಹಣ್ಣಿನ ರಸ, ಏಲಕ್ಕಿ ಪುಡಿ ಮತ್ತು ಕೇಸರಿ ದಳ ಹಾಕಿ ಹಾಕಿ ತಿರುವಿ ಬಿಸಿ ಮಾಡಿ. ಮಾವಿನ ರಸ ದಪ್ಪಗಾಗುವವರೆಗೆ ಬೇಯಿಸಿ. ಇದಕ್ಕೆ ಹಾಲಿನ ಪುಡಿಯ ಮಿಶ್ರಣ ಹಾಕಿ ಮಿಕ್ಸ್‌ ಮಾಡಿ. ಈ ಮಿಶ್ರಣ ದಪ್ಪಗಾಗುವರೆಗೆ ಬೇಯಿಸಿ . ಬಳಿಕ ಇದರಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಇಡಿ. ಕೈಗೆ ಎಣ್ಣೆ ಸವರಿ ಆ ಉಂಡೆಯ ಮಧ್ಯೆ ಒಂದು ಬಾದಾಮಿ ಇಟ್ಟು ಮುಚ್ಚಿ ಮಾವಿನ ಆಕಾರ ಮಾಡಿ. ಅದರ ಮೇಲೆ ಕೇಸರಿ ದಳ ಇಟ್ಟು ಸರ್ವ್‌ ಮಾಡಿ.
ಮ್ಯಾಂಗೊ ಐಸ್‌ಕ್ರೀಮ್‌: ಮೂರು ಕಪ್‌ ಹಾಲಿಗೆ ಒಂದು ಕಪ್‌ ಸಕ್ಕರೆ ಹಾಕಿ ಕುದಿಸಿ. ಇದು ಕುದಿಯುವಾಗ ಸ್ವಲ್ಪ ಹಾಲಿನಲ್ಲಿ ನೆನೆಸಿಟ್ಟ ಕಸ್ಟರ್ಡ್‌ ಪುಡಿ ಹಾಕಿ ತಿರುವಿ ಕುದಿಸಿ. ಬಳಿಕ ಕೆಳಗಿಳಿಸಿ ಮಿಶ್ರಣ ತಣ್ಣಗಾದ ಬಳಿಕ ಒಂದು ಕಪ್‌ ಮಾವಿನ ಹಣ್ಣಿನ ರಸ, ಮೂರು ಕಪ್‌ ಕೆನೆ, ಒಂದು ಚಮಚ ವೆನಿಲ್ಲಾ ಹಾಕಿ ಮಿಕ್ಸ್‌ ಮಾಡಿ. ಇದನ್ನು ಪಾತ್ರೆಯೊಂದಕ್ಕೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿ ಸ್ವಲ್ಪ ಗಂಟೆಗಳ ಕಾಲ ಫ್ರೀಜರ್‌ನಲ್ಲಿಡಿ. ನಂತರ ತೆಗೆದು ಹ್ಯಾಂಡ್‌ ಬೀಟ್‌ ಮಾಡಿ ಮತ್ತೆ ಫ್ರೀಜರ್‌ನಲ್ಲಿಡಿ. ಮತ್ತೊಮ್ಮೆ ತೆಗೆದು ಬೀಟ್‌ ಮಾಡಿ ಫ್ರೀಜರ್‌ನಲ್ಲಿಡಿ. ಆಮೇಲೆ ಸವಿಯಿರಿ.