ಮಾವಿನ ಭಾವಿಯಲ್ಲಿ ಮತದಾನ ಜಾಗೃತಿ ಅಭಿಯಾನ

ಸಂಜೆವಾಣಿ ವಾರ್ತೆ
ಲಿಂಗಸುಗೂರು.ಮಾ.೩೦- ತಾಲೂಕಿನ ಮಾವಿನಭಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರತ ಚುನಾವಣಾ ಆಯೋಗ ೨೦೨೪, ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ ರಾಯಚೂರು ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ ತಾಲೂಕು ಸ್ವಿಪ್ ಸಮಿತಿ ಲಿಂಗಸಗೂರು, ಸಂಜೀವಿನಿ- ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ರ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ (ಸಂಜೀವಿನಿ) ತಾಲೂಕು ವ್ಯವಸ್ಥಾಪಕರು(ಕೃಷಿ) ಮಲ್ಲಪ್ಪ ಅವರು ಮಾತನಾಡುತ್ತ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಹಾಗೂ ಮತದಾನ ಮಹತ್ವ ತಿಳಿಸಿ, ಉದ್ಯೋಗ ಖಾತ್ರಿ ದುಡಿಮೆ ಖಾತ್ರಿ ಅಭಿಯಾನ ಉದ್ದೇಶಿಸಿ ಮಾತನಾಡಿ ಏಪ್ರಿಲ್ ಒಂದರಿಂದ ಮೇ ಅಂತ್ಯದವರೆಗೆ ನಿರಂತರವಾಗಿ ಕೂಲಿಕಾರರಿಗೆ ನರೇಗಾ ಯೋಜನೆಯಡಿ, ಪ್ರತಿಯೊಂದು ಕುಟುಂಬಕ್ಕೆ ೧೦೦ ದಿನ ಕೆಲಸ ನೀಡಲಾಗುವುದು, ಎಲ್ಲರೂ ನಮೋನೆ ೬ ಅರ್ಜಿ ಸಲ್ಲಿಸಿ ಕೆಲಸ ಮಾಡಲು ತಿಳಿಸುತ್ತಾ, ದುಡಿಮೆ ಖಾತ್ರಿಯನ್ನು ಎಲ್ಲರು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
(ಸಂಜೀವಿನಿ) ಕೌಶಲ್ಯ ವಲಯ ಮೇಲ್ವಿಚಾರಕರು ಬಸವರಾಜ ಕಟ್ಟಿಮನಿ ಅವರು ಮತದಾನ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು, ಮಹಿಳೆಯರಿಂದ ಮತದಾನದ ರಂಗೋಲಿ ಬಿಡಿಸುವ ಮೂಲಕ ಹಾಗೂ ಬೀದಿಯಲ್ಲಿ ಮಹಿಳೆಯರಿಂದ ಮತದಾನ ಘೋಷಣೆ ಕೂಗುತ್ತಾ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದವರು, ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಎಲ್‌ಸಿಆರ್‌ಪಿ ಹುಲಿಗೆಮ್ಮ, ಶಾಂತಮ್ಮ, ಕೃಷಿಸಖಿ ಶಕುಂತಲಾ, ಪಶುಸಖಿ ರತ್ನಮ್ಮ ಹಾಗೂ ಕಸವಿಲೇವಾರಿ ಘಟಕದ ಸಿಬ್ಬಂದಿಗಳು ಮತ್ತು ಪಂಚಾಯತ್ ಸಿಬ್ಬಂದಿಗಳು ಮಹಿಳೆಯರು ಹಾಜರಿದ್ದರು.