ಮಾವಿನ ಬಂಪರ್ ಫಸಲು, ರೈತರ ಮೊಗದಲ್ಲಿ ಮಂದಹಾಸ ತಂದ ಹಣ್ಣುಗಳ ರಾಜ

ವಿಶೇಷ ವರದಿ: ಶಿವಕುಮಾರ ಸ್ವಾಮಿ

ಬೀದರ್: ಎ.12:ಜಿಲ್ಲೆಯಲ್ಲಿ ಹಣ್ಣುಗಳ ರಾಜ ಮಾವು ಬೆಳೆ ಉತ್ತಮವಾಗಿ ಬಂದಿದೆ. ಅತಿವೃಷ್ಟಿಯಿಂದ ಕಂಗಾಲಾಗಿದ್ದ ರೈತನಿಗೆ ಮಾವು ಬೆಳೆ ಲಾಭ ತಂದುಕೊಡುವ ನಿರೀಕ್ಷೆ ಹುಟ್ಟಿಸಿದೆ. ನಾಲ್ಕೈದು ವರ್ಷದಿಂದ ಮಾವಿನ ಫಸಲು ಬಂದಿರಲಿಲ್ಲ ಆದರೆ ಈ ವರ್ಷ ಬರ್ಜರಿ ಕಾಯಿ ಬಿಟ್ಟಿದ್ದು ಮಾವು ಬೆಳೆದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಜಿಲ್ಲೆಯಲ್ಲಿ ಒಂದು ದಶಕದಿಂದಲೂ ಪದೇ ಪದೇ ಬರಗಾಲ, ಅತಿವೃಷ್ಠಿ ಅನಾವೃಷ್ಠಿಯಿಂದ ರೈತರು ಒಂದಲ್ಲ ಒಂದು ರೀತಿಯಲ್ಲಿ ಸಂಕಷ್ಟದ ಸ್ಥಿತಿಯನ್ನ ಎದುರಿಸುವಂತಾಗಿತ್ತು. ಆದರೆ ಜಿಲ್ಲೆಯಲ್ಲಿ ಈ ವರ್ಷ ಮಾವಿನ ಗಿಡಗಳಲ್ಲಿ ಭರಪೂರ ಕಾಯಿ ಕಾಣಿಸುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ. ಜಿಲ್ಲೆಯ ಬಹುತೇಕ ರೈತರು ಬೆಳೆಸಿದ ಮಾವಿನ ಗಿಡಗಳಲ್ಲಿ ಉತ್ತಮ ಕಾಯಿ ಬಂದಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಇನ್ನು ಹುಮ್ನಾಬಾದ್ ತಾಲೂಕಿನ ಹುಡುಗಿ ಗ್ರಾಮದ ಕೆ.ಎಂ. ಮುಗಳಿ ಎಂಬ ಪ್ರಗತಿಪರ ರೈತ, ತನ್ನ ಎರಡು ಎಕರೆಯಷ್ಟು ಜಮೀನಿನಲ್ಲಿ ಕೆಸರ್ ತಳಿಯ ಮಾವು ಬೆಳೆಸಿದ್ದಾರೆ.

ಹನಿ ನೀರಾವರಿ ಪದ್ದತಿಯ ಮೂಲಕ ಮಾವು ಬೆಳೆದು ಸೈ ಎನಿಸಿಕೊಂಡ ರೈತ

ಇನ್ನು ಇವರು ಮಾವು ಸಸಿಗಳನ್ನ ನೆಟ್ಟು ಐದು ವರ್ಷವಾಗಿದ್ದು, ಈ ವರ್ಷ ಉತ್ತಮವಾಗಿ ಮಾವು ಫಸಲು ಬಂದಿದೆ. ಮಾವಿಗೆ ಹನಿ ನೀರಾವರಿ ಪದ್ದತಿಯ ಮೂಲಕ ನೀರು ಬಿಡಲಾಗುತ್ತಿದೆ. ಮತ್ತು ಇದಕ್ಕೆ ಕಾಡು ಪ್ರಾಣಿಗಳು, ಕೋತಿಗಳ ಕಾಟ ತಪ್ಪಿಸಲು ತಂತಿ ಬೇಲಿ ಹಾಕಿಸಿದ್ದು, ಮೇಲೆ ಸೋಲಾರ್ ಅವಳವಡಿಸಲಾಗಿದೆ. ಇದರಿಂದಾಗಿ ಕೋತಿಗಳು ಕಾಡು ಪ್ರಾಣಿಗಳಿಂದ ಯಾವುದೆ ರೀತಿಯ ಸಮಸ್ಯೆ ಮಾವಿನ ಗಿಡಗಳಿಗೆ ಆಗಿಲ್ಲ. ಕಾಯಿಗಳಿಗೂ ಕೂಡಾ ಯಾವುದೆ ಸಮಸ್ಯೆಯಾಗಿಲ್ಲ ಹೀಗಾಗಿ ನಮ್ಮ ಹೊಲದಲ್ಲಿ ಉತ್ತಮವಾದ ಇಳುವರಿ ಬರುವ ನಿರಿಕ್ಷೇಯಿದೆ ಎಂದು ರೈತರು ಹೇಳುತ್ತಿದ್ದಾರೆ.

ಬರಕ್ಕೆ ಹೆಸರಾದ ಜಿಲ್ಲೆಯಲ್ಲಿ 2151 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ತೋಟಗಳಿದ್ದು, ಬಹುತೇಕರು ಲಾಭದ ನಿರೀಕ್ಷೆಯಲ್ಲಿದ್ದಾರೆ. ಕೆಲವು ಹಳ್ಳಿಗಳಲ್ಲಿ ನೈಸರ್ಗಿಕವಾಗಿ ಮಾವಿನ ಮರಗಳು ಬೆಳೆದು ನಿಂತಿವೆ. ಗಿಡಗಳು ಜನವರಿ ಕೊನೆ ಹಾಗೂ ಫೆಬ್ರವರಿ ಆರಂಭದಲ್ಲಿ ಉತ್ತಮ ಹೂ ಬಿಟ್ಟಿತ್ತು. ಇದೀಗ ಲೆಕ್ಕಾಚಾರಕ್ಕಿಂತ ಮೊದಲೇ ಫಸಲು ಕೈಗೆ ಎಟುಕುವ ನಿರೀಕ್ಷೆ ಮಾವಿನ ಬೆಳೆಗಾರರಲ್ಲಿ ಗರಿಗೆದರಿದ್ದು, ಹೋದ ವರ್ಷಕ್ಕಿಂತ ಈ ವರ್ಷ ಮಾವಿನ ಮರದಲ್ಲಿ ಉತ್ತಮವಾಗಿ ಕಾಯಿ ಬಿಟ್ಟಿದ್ದು ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿ ಜಿಲ್ಲೆಯ ರೈತರಿದ್ದಾರೆ.

ಜಿಲ್ಲೆಯಲ್ಲಿ ಮಾವು ಬೆಳೆಗೆ ಉತ್ತಮವಾದ ಮಣ್ಣು ಹಾಗೂ ಹವಾಮಾನ

ಹೌದು ಜಿಲ್ಲೆಯಲ್ಲಿ ಮಾವು ಬೆಳೆಗೆ ಉತ್ತಮವಾದ ಮಣ್ಣು ಹಾಗೂ ಉತ್ತಮ ಹವಾಮಾನ ಇರುವುದರಿಂದ ಇಲ್ಲಿ ಮಾವು ಬೆಳೆಗೆ ಉತ್ತಮ ಎಂದು ಇಲ್ಲಿನ ತೋಟಗಾರಿಕೆ ಇಲಾಖೆಯ ತೋಟಗಾರಿಗೆ ಉಪ ನಿರ್ದೇಶಕ ವಿಶ್ವನಾಥ್ ಹೇಳುತ್ತಾರೆ. ಈ ವರ್ಷ ಡಿಸೆಂಬರ್-ಜನವರಿಯಲ್ಲಿ ಶೇ.85ರಷ್ಟು ಗಿಡಗಳು ಹೂ ಬಿಟ್ಟಿದ್ದು, ಅಕಾಲಿಕ ಮಳೆ ಮತ್ತು ಹೆಚ್ಚು ಇಬ್ಬನಿ ಕಾಣಿಸಿಕೊಳ್ಳದ ಕಾರಣ ಉತ್ತಮ ಫಸಲು ಬರುವ ನಿರೀಕ್ಷೆ ಇದೆ. ಸದ್ಯಕ್ಕೆ ಮಾವಿನ ಬೆಳೆಗೆ ಯಾವುದೇ ರೋಗ ಮತ್ತು ಕೀಟಗಳ ಬಾಧೆ ತಟ್ಟಿಲ್ಲ. ಪ್ರತಿವರ್ಷ ಕಾಡುತ್ತಿದ್ದ ಮ್ಯಾಂಗೋ ಹ್ಯಾಪರ್ ರೋಗ ಈ ಬಾರಿ ಕಾಣಿಸಿಕೊಂಡಿಲ್ಲ ಎನ್ನುತ್ತಿದ್ದಾರೆ. ಇನ್ನು ಮಾವು ಬೆಳೆ ಬೆಳೆಯಲು ಸೂಕ್ತವಾದ ವಾತಾವರಣ ಅದಕ್ಕೆ ಬೇಕಾದ ಕೆಂಪು ಮಿಶ್ರಿತ ಮಣ್ಣು ಇಲ್ಲಿ ಇರುವುದರಿಂದ ರೈತರು ಮಾವು ಬೆಳೆದು ಬದುಕು ಹಸನಾಗಿಸಿಕೊಳ್ಳಬಹುದೆಂದು ತೋಟಗಾರಿಗೆ ಇಲಾಖೆಯ ಅಧಿಕಾರಿಗಳು ರೈತರಿಗೆ ಸಲಹೆ ನೀಡುತ್ತಿದ್ದಾರೆ. ಈ ವರ್ಷ ಮಳೆಯಾಗದಿದ್ದರೂ ಮಾವು ಬೆಳೆ ಜಿಲ್ಲೆಯಲ್ಲಿ ಚೆನ್ನಾಗಿ ಬಂದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡುವುದಂತೂ ಸತ್ಯ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಹೀಗಾಗಿ ಈ ವರ್ಷ ಮಾವು ಇಳುವರಿ ಎಕರೆಗೆ 30 ರಿಂದ 40 ಕ್ವಿಂಟಾಲ್ ಇಳುವರಿ ಬರುವ ನಿರೀಕ್ಷೆ ಇದೆ. ಸದ್ಯ ಭರಪೂರ ಲಾಭ ತಂದುಕೊಂಡುವ ಇಳುವರಿ ಬಂದರು ಸೂಕ್ತ ಮಾರುಕಟ್ಟೆ ದೊರೆಯದ ಹಿನ್ನಲೆಯಲ್ಲಿ ಮಾರಾಟ ಮಾಡಲು ದೂರದ ಮುಂಬೈ, ಪುಣೆ ಮಾರುಕಟ್ಟೆಗೆ ತಗೆದುಕೊಂಡು ಹೋಗುವ ಅನಿವಾರ್ಯತೆ ರೈತರಿಗಿದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾವಿನ ಮಾರಾಟ ವ್ಯವಸ್ಥೆ ಇಲ್ಲದೆ ಇರುವದರಿಂದಾಗಿ ದುಬಾರಿ ಸಾಗಾಣಿಕೆ ವೆಚ್ಚ ಭರಿಸಬೇಕಾಗಿದೆ. ಸರಕಾರ ಪ್ರತಿ ವರ್ಷ ತೋಟಗಾರಿಕೆ ಬೆಳೆಗಾರನ್ನು ಪೆÇ್ರೀತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಜಾರಿಗೆ ತಂದಿದೆ. ಆದರೆ ಸ್ವಯಂ ಪ್ರೇರಣೆಯಿಂದ ಬರಡು ನೆಲದಲ್ಲಿಯೂ ಬಂಪರ್ ಬೆಳೆ ಬೆಳೆಯುತ್ತಿರುವ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದು ಈ ಭಾಗದ ರೈತರ ಕೋರಿಕೆಯಾಗಿದೆ.