ಮಾವಿನ ಕೆರೆ ಒತ್ತುವರಿ : ಕ್ರಮಕ್ಕೆ ಎರಡು ಠಾಣೆಗಳಿಗೆ ಪೌರಾಯುಕ್ತರ ಪತ್ರ

ರಾಯಚೂರು.ಏ.06- ನಗರದ ಐತಿಹಾಸಿಕ ಮಾವಿನ ಕೆರೆ ಸರ್ವೇ ನಂ.1230, 1231, 1232 ರಲ್ಲಿ ಒತ್ತುವರಿ ಮಾಡುತ್ತಿರುವುದು ಹಾಗೂ ಕೆರೆಯ ಗಡಿ ಸಂರಕ್ಷಣೆ ಮತ್ತು ಸುತ್ತಲಲ್ಲಿ ನಡೆಯುತ್ತಿರುವ ಅನಧಿಕೃತ ಚಟುವಟಿಕೆ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ನಗರಸಭೆ ಪೌರಾಯುಕ್ತರು ಸದಾರ್ ಬಜಾರ್ ಪೊಲೀಸ್ ಠಾಣೆ ಮತ್ತು ಪಶ್ಚಿಮ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದಾರೆ.
ಕೆರೆ ಒತ್ತುವರಿ ಮತ್ತು ಕೆರೆಯ ದಡದಲ್ಲಿ ಅಕ್ರಮವಾಗಿ ಮಣ್ಣು ಹಾಕುವ ಪ್ರಕರಣಕ್ಕೆ ಸಂಬಂಧಿಸಿ ಉರುಕುಂದಿ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ನಿನ್ನೆ ಪೌರಾಯುಕ್ತರು, ಎರಡು ಠಾಣೆಗಳ ಸಬ್ ಇನ್ಸ್‌ಪೆಕ್ಟರ್‌ಗಳಿಗೆ ಈ ಕುರಿತು ಪತ್ರ ಬರೆದಿದ್ದಾರೆ. ಕೆರೆಯ ಗಡಿ ಸಂರಕ್ಷಣೆ ಮತ್ತು ಸರಹದ್ದು ಸುತ್ತಿನಲ್ಲಿ ನಡೆಯುತ್ತಿರುವ ಅಧಿಕೃತ ಚಟುವಟಿಕೆಗಳನ್ನು ಅನಾಮಿಕ / ಅನಾಮಧೇಯ ವ್ಯಕ್ತಿಗಳು ಕೆರೆಯ ಸುತ್ತಲು ಅನಧಿಕೃತವಾಗಿ ವಾಹನಗಳನ್ನು ಬಳಸಿಕೊಂಡು ಅಥವಾ ಇತರೆ ರೀತಿಯಲ್ಲಿ ಕೆರೆಯಲ್ಲಿ ಭಗ್ನಾವಶೇಷಗಳನ್ನು ಹಾಗೂ ಮಣ್ಣು ರಾಶಿಯನ್ನು ಹಾಕಿ, ಅನಧಿಕೃತವಾಗಿ ಭೂ ಕಬಳಿಸುತ್ತಿರುವುದು ಕಂಡು ಬಂದಿದೆ.
ಈ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿಯೂ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದಾಗ ರಾತ್ರೋರಾತ್ರಿ ಮಣ್ಣು ಕೆರೆಯಲ್ಲಿ ಸುರಿಯುತ್ತಿರುವುದು ಕಂಡು ಬಂದಿದೆ. ಅಲ್ಲದೇ, ಹಗಲಲ್ಲೇ ಮಣ್ಣು ಹಾಕುತ್ತಿರುವ ಸಂದರ್ಭದಲ್ಲಿ ಸಿಬ್ಬಂದಿಯೂ ತಡೆದು ನಿಲ್ಲಿಸಿದಾಗ ಟ್ರ್ಯಾಕ್ಟರ್ ಅವರು ಸರಿಯಾಗಿ ಪ್ರೋತ್ಸಾಹ ನೀಡದೇ, ಸಿಬ್ಬಂದಿಗಳ ಮೇಲೆ ಜಗಳವಾಡುವ ಮತ್ತು ಬೆದರಿಸುವ ಕೃತ್ಯ ಮಾಡುತ್ತಿದ್ದಾರೆ. ಸುಪ್ರೀಂ ಸಿದ್ಧ ಮಾವಿನ ಕೆರೆಯನ್ನು ಒತ್ತುವರಿಯಿಂದ ಸಂರಕ್ಷಿಸುವುದು ಅತಿವಶ್ಯಕವಾಗಿರುತ್ತದೆ.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪೊಲೀಸ್ ಪ್ರಕರಣ ದಾಖಲಿಸುವಂತೆ ನಿರ್ದೇಶಿಸಿದ್ದಾರೆ. ಈ ಪ್ರಯುಕ್ತ ಕೂಡಲೇ ಮಾವಿನ ಕೆರೆಯ ಸರಿಹದ್ದು ತನಿಖೆ ನಡೆಸಿ, ಅನಧಿಕೃತವಾಗಿ ಮಣ್ಣು ತುಂಬಿ ಮಾಡುತ್ತಿರುವವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲು ಹಾಗೂ ಕಾನೂನಿನ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಕೋರಿದ್ದಾರೆ. ಈಗಾಗಲೇ ಮಾವಿನ ಕೆರೆ ಅನೇಕ ಕಡೆ ಒತ್ತುವರಿ ಮಾಡಲಾಗಿದೆ. ಕೆರೆಯಲ್ಲಿ ನೀರು ಭತ್ತಿದ್ದರಿಂದ ಕೆಲವರು ಕೆರೆಯ ಒಂದು ಭಾಗದಲ್ಲಿ ಮರಂ ತುಂಬಿ ಸಮತಟ್ಟು ಮಾಡುತ್ತಿದ್ದಾರೆ.
ಈ ಕುರಿತು ನಿನ್ನೆಯಷ್ಟೇ ಸಂಜೆವಾಣಿಯಲ್ಲಿ ಮತ್ತೊಂದು ವಿಸ್ತೃತ ವರದಿ ಮಾಡಲಾಗಿತ್ತು. ಈ ವರದಿಯ ಮಾರನೇ ದಿನವೇ ಪೌರಾಯುಕ್ತರಿಂದ ಪೊಲೀಸರಿಗೆ ಪತ್ರ ಬರೆಯಲಾಗಿದೆ. ಐತಿಹಾಸಿಕ ಮಾವಿನ ಕೆರೆ ಸಂರಕ್ಷಣೆಯಲ್ಲಿ ನಗರಸಭೆ ಪೊಲೀಸರ ನೆರವು ಕೋರುವ ಮೂಲಕ ಒತ್ತುವರೆ ತಡೆಗೆ ಮುಂದಾಗಿದೆ.