ಮಾವಿನ ಕೆರೆ ಒತ್ತುವರಿ : ಕುರುಡರಾದ ಜನಪ್ರತಿನಿಧಿಗಳು, ಅಧಿಕಾರಿಗಳು

ರಾಯಚೂರು.ಏ.05- ಐತಿಹಾಸಿಕ ಮಾವಿನ ಕೆರೆ ಬಗ್ಗೆ ಇರುವ ಸಾಮಾನ್ಯ ಜನರಿಗೆ ಕಾಳಜಿ, ಈ ಕ್ಷೇತ್ರವನ್ನು ಪ್ರತಿನಿಧಿಸುವ ಸಂಸದರು, ಶಾಸಕರು, ನಗರಸಭೆ ಅಧ್ಯಕ್ಷರು, ಸದಸ್ಯರು ಹಾಗೂ ಜಿಲ್ಲಾಧಿಕಾರಿ ನಗರಸಭೆ ಅಧಿಕಾರಿಗಳಿಗೆ ಏಕಿಲ್ಲ?.
ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಮಾವಿನ ಕೆರೆ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ.ವೆಚ್ಚಕ್ಕಾಗಿ ಸಿದ್ಧತೆ ನಡೆದಿದೆ. ಐ.ಬಿ.ರಸ್ತೆಯಲ್ಲು ಸುಮಾರು 5 ರಿಂದ 6 ಎಕರೆ ಜಮೀನು ಮರಂ ಹಾಕಿ ಲೇವಲ್ ಮಾಡುವ ಪ್ರಕ್ರಿಯೆ ಹಾಡು ಹಗಲೇ ನಡೆದಿದ್ದರೂ, ಇದನ್ನು ಯಾರು ಗಮನಿಸದಿರುವುದು ಮೇಲೆ ಸೂಚಿತ ವ್ಯಕ್ತಿಗಳ ಕುರುಡುತನವೋ ಅಥವಾ ಅತಿಕ್ರಮಣ ಪ್ರಕ್ರಿಯೆ ಕಂಡು ಕಾಣದಂತೆ ನಿರ್ಲಕ್ಷ್ಯಿಸಲಾಗುತ್ತಿದೆಯೋ?. ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ತೀವ್ರ ಅಸಮಾಧಾನಗೊಂಡ ಸಾರ್ವಜನಿಕರು ಈಗ ಮಾವಿನ ಕೆರೆ ಒತ್ತುವರಿ ಬಗ್ಗೆ ವಿಡಿಯೋ ಮಾಡಿ, ವಾಟ್ಸಾಪ್ ಮತ್ತು ಫೇಸ್ ಬುಕ್‌ಗಳಲ್ಲಿ ವೈರಲ್ ಮಾಡುತ್ತಿದ್ದಾರೆ.
ಈ ವಿಡಿಯೋದಲ್ಲಿ ಮಾತನಾಡುವ ವ್ಯಕ್ತಿ ನಗರದಲ್ಲಿ ಸಂಸದರು, ಶಾಸಕರು, ನಗರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳು ದೊಡ್ಡ ದೊಡ್ಡವರೆಲ್ಲಾ ಇದ್ದರೂ, ಯಾರು ಸಹ ಅತಿಕ್ರಮಣವನ್ನು ತಡೆಯುತ್ತಿಲ್ಲ. ಈ ಅತಿಕ್ರಮಣದಿಂದಾಗಿ ನಗರದ ಅಂತರ್ಜಲ ಪ್ರಮಾಣ ಕುಸಿಯುವಂತಾಗಿದೆ. ಮಾವಿನ ಕೆರೆಯನ್ನು ರಕ್ಷಿಸಲು ಸಾರ್ವಜನಿಕರೇ ಮುಂದಾಗಬೇಕಾಗಿದೆಂದು ಸಂದೇಶ ನೀಡಲಾಗಿದೆ. ಐತಿಹಾಸಿಕ ಕೆರೆಯ ಬಗ್ಗೆ ಜನ ಸಾಮಾನ್ಯರಿಗಿರುವ ಪ್ರಜ್ಞೆ ನಮ್ಮನ್ನಾಳುವವರಲ್ಲಿ ಇಲ್ಲದಿರಲು ಕಾರಣವೇನು?.
ರಾಯಚೂರಿನ ಇತಿಹಾಸವನ್ನೇ ಯಾರಾದರೂ ಕಬಳಿಸಿದರೂ, ರಕ್ಷಕರು ಕಣ್ಮುಚ್ಚಿ ಕೂಡುವರೇ?. ಕೇವಲ ಹೇಳಿಕೆಗಳಿಗೆ ಮಾತ್ರ ಸೀಮಿತವಾಗಿ, ಆಂತರಿಕವಾಗಿ ಅತಿಕ್ರಮಣದಾರರೊಂದಿಗೆ ಶಾಮೀಲಾಗಿ, ಅತಿಕ್ರಮಣಕ್ಕೆ ನೆರವಾಗುವರೇ?. ಒಂದಷ್ಟು ಹಣ ನೀಡಿದರೇ, ರಾಯಚೂರನ್ನೇ ಒತ್ತುವರಿಗೆ ಬಿಡಲು ಇವರು ಸಿದ್ಧರಿದ್ದಾರೆಯೇ ಇಂತಹವರನ್ನು ನಂಬಿ ರಾಯಚೂರಿನ ಅಭಿವೃದ್ಧಿ ಮತ್ತು ಒತ್ತುವರಿ ತೆರವಿನ ಬಗ್ಗೆ ವಿಶ್ವಾಸದಿಂದರಲು ಸಾಧ್ಯವೇ? ಎನ್ನುವ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು?
ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಅತಿಕ್ರಮಣ ಮತ್ತಿತರ ಚಟುವಟಿಕೆಗಳನ್ನು ಗಮನಿಸಿದರೇ, ಇಲ್ಲಿ ಆಡಳಿತ ಎನ್ನುವ ವ್ಯವಸ್ಥೆ ಎನ್ನುವುದು ಜೀವಂತ ಇದೆಯೇ? ಎಂದು ಅನುಮಾನ ಮೂಡುವಂತೆ ಮಾಡುತ್ತದೆ. ಗುತ್ತೇದಾರಿಕೆ, ಪರ್ಸೆಂಟೇಜ್ ಪಡೆಯುವುದೇ ಕೆಲ ಜನಪ್ರತಿನಿಧಿಗಳ ವೃತ್ತಿಯಾಗಿದ್ದರೇ, ಕೆಲ ಅಧಿಕಾರಿಗಳು ಇವರೊಂದಿಗೆ ಶಾಮೀಲಾಗಿ ತಾವು ಒಂದಿಷ್ಟು ಬಾಚಿಕೊಳ್ಳುವ ವ್ಯವಸ್ಥೆಯ ಭಾಗವಾಗಿದ್ದಾರೆ. ಇಂತಹವರ ಮಧ್ಯೆ 7 ಶತಮಾನಗಳ ಇತಿಹಾಸದ ಮಾವಿನ ಕೆರೆ ಉಳಿಯುವುದೇ?.
ಇವರನ್ನು ನಂಬದೇ, ಜನರೇ ಮಾವಿನ ಕೆರೆಯನ್ನು ಉಳಿಸಲು ಮುಂದಾಗದಿದ್ದರೇ, ದಿನಕ್ಕೆ ಇಂತಿಷ್ಟು ಅತಿಕ್ರಮಣಗೊಂಡು ಅಂತಿಮವಾಗಿ ಮಾವಿನ ಕೆರೆ ಬೃಹತ್ ಕಟ್ಟಡಗಳ ಸ್ಥಳವಾಗಿ ಪರಿವರ್ತನೆಗೊಳ್ಳುವುದರಲ್ಲಿ ಅನುಮಾನವಿಲ್ಲ ಎನ್ನುವಂತಾಗಿದೆ.