ಮಾವಿನ ಕೆರೆ ಅಭಿವೃದ್ಧಿ: ಮೊದಲ ಹಂತದಲ್ಲಿ ನೀರು ತೆರವಿಗೆ ಡಿಸಿ ಸೂಚನೆ

ರಾಯಚೂರು,ಮಾ.೨೫- ನಗರದ ಮಾವಿನ ಕೆರೆಯ ಸರ್ವಾಂಗೀಣ ಅಭಿವೃದ್ಧಿಗೆ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಕೆರೆಯ ನೀರನ್ನು ತೆರವುಗೊಳಿಸುವುದನ್ನು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ಮಾ.೨೪ರ ಬುಧವಾರ ವೀಕ್ಷಿಸಿದರು.
ಈ ಬೇಸಿಗೆಯಲ್ಲಿ ತ್ವರಿತವಾಗಿ ಕೆರೆಯ ನೀರು ಖಾಲಿ ಮಾಡಿದ್ದಲ್ಲಿ ಮಳೆಗಾಲ ಆರಂಭಕ್ಕೂ ಮುನ್ನ ಕೈಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯ. ಆದ ಕಾರಣ ಮೂದಲು ಕೆರೆಯಲ್ಲಿ ಉಳಿದಿರುವ ನೀರಿನ ಆಳವನ್ನು ಪರಿಶೀಲಿಸಿ, ಅದನ್ನು ಸಂಪೂರ್ಣವಾಗಿ ಹೊರಹಾಕಬೇಕು. ಮಾರ್ಚ್ ಅಂತ್ಯಕ್ಕೆ ನೀರು ಸಂಪೂರ್ಣವಾಗಿ ಖಾಲಿಯದ್ದಲ್ಲಿ ವಿಶಾಲವಾದ ಕೆರೆಯ ಹೂಳನ್ನು ತೆಗೆಯಲು ಸಾಧ್ಯ, ಹೂಳು ತೆಗೆಯಲು ವ್ಯವಸ್ಥಿತವಾಗಿ ಕಾಮಗಾರಿಗಳನ್ನು ಹಮ್ಮಿಕೊಳಬೇಕು, ಅದಕ್ಕೆ ನುರಿತ ಎಂಜಿನಿಯರುಗಳ ನೆರವು ಪಡೆಯಬೇಕೆಂದು ನಗರಸಭೆ ಪೌರಾಯುಕ್ತ ವೆಂಕಟೇಶ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ವೆಂಕಟೇಶ ಅವರು ಇದುವರೆಗೂ ಪಂಪ್ ಇಲ್ಲದೆ ನೀರು ತೆರವುಗೊಳಿಸಲಾಗಿತ್ತು. ಆದರೆ ಇದೀಗ ಮೋಟಾರ್ ಅಳವಡಿಸಿ ನೀರು ಖಾಲಿ ಮಾಡಲಾಗುತ್ತದೆ. ಮುಂಬರುವ ಒಂದು ವಾರದೊಳಗಾಗಿ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡುವುದಾಗಿ ತಿಳಿಸಿದರು.
ದೊಡ್ಡ ದೊಡ್ಡ ಮೋಟಾರಗಳನ್ನು ಅಳವಡಿಸಿ ನೀರು ತೆರವು ಮಾಡಿ, ಒಣಭಾಗವೊಂದನ್ನು ಆಯ್ಕೆ ಮಾಡಿಕೊಂಡು ಹೂಳು ತೆಗೆಯುವ ಕಾಮಗಾರಿ ಆರಂಭಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಯವರು, ನೀರಿನ ಮೂಲಗಳ ಅತಿಕ್ರಮಣಕಾರರ ವಿರುದ್ದ ಎಫ್‌ಐಆರ್ ದಾಖಲಿಸಿ, ಅವರನ್ನು ಬಂಧಿಸುವಂತೆ ಸೂಚಿಸಿದರು. ಮಾವಿನ ಕೆರೆಗೆ ಈ ಹಿಂದೆ ವಿವಿಧೆಡೆಗಳಿಂದ ಒಳಚರಂಡಿ ನೀರು ಹರಿದುಬರುತ್ತಿತ್ತು, ಅದನ್ನು ತಡೆಹಿಡಿಯಲಾಗಿದೆ, ಮತ್ತೊಮ್ಮೆ ಅದನ್ನು ನಗರಸಭೆ ಅಧಿಕಾರಿಗಳು ಪರಿಶೀಲಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಶರಣಪ್ಪ ಹಾಗೂ ನಗರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.