ಮಾವಿನಕಟ್ಟೆ, ಕಂದ್ರಪ್ಪಾಡಿ, ಕೊಲ್ಲಮೊಗ್ರು ಅಭಿವೃದ್ಧಿಗೆ ಬದ್ದ

ಸುಳ್ಯ, ನ.೪- ಸುಳ್ಯ ತಾಲೂಕಿನ ಬಹು ಬೇಡಿಕೆಯ ಮಾವಿನಕಟ್ಟೆ, ಕಂದ್ರಪ್ಪಾಡಿ, ಕರಂಗಲ್ಲು, ಕೊಲ್ಲಮೊಗ್ರು
ರಸ್ತೆಯ ಅಭಿವೃದ್ಧಿ ಕಾಮಗಾರಿಯನ್ನು ೨೦೨೧ ರ ಜನವರಿ ಅಂತ್ಯದೊಳಗೆ ಕೆಲಸ ಪ್ರಾರಂಭಿಸುವುದಾಗಿ ಶಾಸಕ
ಎಸ್.ಅಂಗಾರ ಹೇಳಿದರು.
ಕರಂಗಲ್ಲು, ದೊಡ್ಡಕಜೆ ,ಮುಳ್ಳುಬಾಗಿಲು, ಕಜ್ಜೋಡಿ, ಕಟ್ಟ ಭಾಗದ ರಸ್ತೆ ಫಲಾನುಭವಿಗಳ ಸಭೆ ಬೊಳಿಯಪ್ಪ ಮಾವಜಿ ಅವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಈ ಭಾಗದ ಸುಮಾರು ೧೫೦ ಮಂದಿ ಅಲ್ಲಿ ಸೇರಿದ್ದು, ಇಲ್ಲಿನ ರಸ್ತೆ ಅಭಿವೃದ್ಧಿಗೆ ಬಲವಾಗಿ ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಸಕರು ಮುಂದಿನ ವರ್ಷದ ಜನವರಿ ಅಂತ್ಯದೊಳಗೆ ಈ ರಸ್ತೆ ಅಭಿವೃದ್ಧಿ ಕೆಲಸ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಥವಾ ಬೇರೆ ಯಾವುದಾದರೂ ಅನುದಾನ ಉಪಯೋಗಿಸಿ ಈ ಭಾರಿ ಕೆಲಸ ಮಾಡಿಸಿಯೇ ತೀರಿಸುವುದಾಗಿ ನುಡಿದರು. ಈ ಭಾಗದಲ್ಲಿ ಯಾವುದೇ ನೆಟ್ವರ್ಕ್ ಸಿಗದೇ ಇರುವುದನ್ನು ಗಮನಕ್ಕೆ ತಂದಾಗ ಯಾವುದಾದರೂ ಒಂದು ನೆಟ್ವರ್ಕ್‌ಗಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ, ದಿವಾಕರ ಮುಂಡೋಡಿ, ಭವಾನಿಶಂಕರ ಮುಂಡೋಡಿ, ಕೇಶವ ಭಟ್ ಕಟ್ಟ, ಶಿವಪ್ರಸಾದ್ ಏನೆಕಲ್ಲು, ವಿನಯ ಮುಳುಗಾಡು, ತಿಮ್ಮಪ್ಪ ಗೌಡ ಹೆರೆಕಜೆ ವೇದಿಕೆಯಲ್ಲಿ ಇದ್ದರು. ಸಭೆಯಲ್ಲಿ ಈ ಭಾಗದ ಹಲವರು ಭಾಗವಹಿಸಿದ್ದರು.