ಮಾವಿಗೆ ಬೂದಿರೋಗ


ಗದಗ,ಡಿ.20: ಹಣ್ಣಿನ ರಾಜ ಎನಿಸಿರುವ ಮಾವಿಗೆ ಸದ್ಯ ಬೂದಿರೋಗ ಕಾಣಿಸಿಕೊಂಡಿದ್ದು, ಮಾವು ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಹೂವು ಬಿಟ್ಟಿದೆ ಈ ಸಲ ಮಾವು ಚೆನ್ನಾಗಿ ಇಳುವರಿ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವ ರೈತರ ಆಸೆಗೆ ಈ ರೋಗ ತಣ್ಣೀರು ಎರಚುತ್ತಿದೆ.
ಹೂ ಬಿಡುವ ಸಮಯದಲ್ಲಿ ಬರುವ ಮಳೆ ಅಥವಾ ಇಬ್ಬನಿ ಈ ರೋಗದ ತೀವ್ರತೆ ಹೆಚ್ಚಿಸುತ್ತದೆ. ಬೂದಿರೋಗದ ಶಿಲೀಂದ್ರ ಕಣಗಳು ಗಾಳಿಯ ಸಹಾಯದಿಂದ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಮತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹರಡುತ್ತವೆ ಎನ್ನಲಾಗುತ್ತಿದ್ದು, ಈ ರೋಗವು `ಓಯಿಡಿಯಂ ಮ್ಯೋಜಿಫೆರೆ ಶಿಲೀಂದ್ರದಿಂದ ಬರುತ್ತದೆ.
ಎಲೆ, ದೇಟು, ಹೂಗೊಂಚಲು, ಹೀಚುಕಾಯಿ ಮತ್ತು ಹಣ್ಣುಗಳ ಮೇಲೆ ಬೂದಿಬಣ್ಣದ ಹಿಟ್ಟನ್ನು ಚೆಲ್ಲಿರುವ ಹಾಗೆ ರೋಗದ ಲಕ್ಷಣಗಳು ಕಾಣುತ್ತಿದ್ದು, ರೋಗಪೀಡಿತ ಭಾಗಗಳು ಉದುರಿ ಬೀಳುವುದರಿಂದ ಇಳುವರಿ ಕಡಿಮೆಯಾಗುತ್ತದೆ. ಅಲ್ಲದೆ ಹೂ ಗೊಂಚಲಿಗೆ ರೋಗ ಬಂದರೆ ಕಾಯಿ ಬಿಡದೆ ಸಂಪೂರ್ಣ ಬೆಳೆ ಹಾನಿ ಆಗುತ್ತದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.
ಹಲವು ಭಾಗದ ರೈತರ ಮಾವಿನ ತೋಟಗಳಲ್ಲಿ ಮಾವಿಗೆ ಜಿಗಿಹುಳು ಮತ್ತು ಬೂದಿರೋಗ ತೀವ್ರ ಪ್ರಮಾಣದಲ್ಲಿ ಕಂಡುಬಂದಿದ್ದು,
ಮಾವು ಸಾಮಾನ್ಯವಾಗಿ ನವೆಂಬರ್- ಫೆಬ್ರವರಿವರೆಗೆ ಹೂ ಬಿಟ್ಟು, ಕಾಯಿ, ಹಣ್ಣು ಬೆಳವಣಿಗೆಯು ಫೆಬ್ರವರಿಯಿಂದ ಜೂನ್‍ವರೆಗೆ ಕಂಡುಬರುತ್ತದೆ. ಮಾವಿನ ಬೆಳೆಯಲ್ಲಿ ಪ್ರಮುಖ ರೋಗಗಳಾದ ಬೂದಿ ರೋಗ, ಚಿಬ್ಬು ರೋಗ, ಅಂಗಮಾರಿ ರೋಗ ಮತ್ತು ಹೂಗೊಂಚಲಿನ ವಿಕಾರತೆಗಳು ಕಂಡು ಬರುತ್ತಿದ್ದು, ಇವುಗಳಿಂದ ಇಳುವರಿ ಕುಂಠಿತವಾಗುತ್ತದೆ ಎಂಬ ಆತಂಕ ರೈತರಲ್ಲಿ ಮೂಡಿಸಿದೆ ಹಾಗಾಗಿ ರೈತರು ಈಗಿನಿಂದಲೇ ಮಾವು ಬೆಳೆಗಳನ್ನು ರಕ್ಷಿಸಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ.
ಮಾವಿಗೆ ಬೂದಿ ರೋಗ ಮತ್ತು ಜಿಗಿ ಹುಳುಗಳ ಬಾಧೆ ಕಂಡುಬಂದರೆ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿಗಾತ್ರದ ಕಾಯಿಗಳು ಉದುರುತ್ತಿದ್ದು, ಮುಂಜಾಗ್ರತ ಕ್ರಮವಾಗಿ ಮಾವು ಬೆಳೆಗಾರರು ಔಷಧಿಗಳನ್ನು ಸಿಂಪಡಣೆ ಮಾಡುತ್ತಿದ್ದಾರೆ.
ಮರದಲ್ಲಿ ಹೂವು ಬಿಟ್ಟಿರುವುದನ್ನು ಕಂಡರೆ, ಈ ಬಾರಿ ಉತ್ತಮ ಫಸಲು ಬರುತ್ತದೆ ಎನ್ನುವ ಭಾವನೆ ಮೂಡುತ್ತದೆ. ಆದರೆ, ವಾತಾವರಣ ಏರುಪೇರಿನಿಂದ ಈ ಬಾರಿ ಮಾವು ಬೆಳೆಗಾರರ ಅಂದಾಜು ಎಲ್ಲಾ ತಲೆಕೆಳಕಾಗುತ್ತಿದೆ. ರೋಗಕ್ಕೆ ತುತ್ತಾಗಿ ಹೂವು ಉದುರುವ ಚಿಂತೆಯೂ ಬೆಳೆಗಾರರನ್ನು ಕಾಡತೊಡಗಿದೆ.
ಜಿಲ್ಲೆಯಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದೆ. ಈ ರೋಗ ನಿಯಂತ್ರಣ 3 ಮೀಮೀ ಇಮೀಡಾಕ್ಲೋಪೈಡ್ , 10 ಗ್ರಾಂ ಕಾಬ್ರನ್ ಡೈ ಜಿರಿ, 20 ಮೀಮಿ ಬೇವಿನ ಎಣ್ಣೆ, ಪ್ರತಿ 10 ಲೀಟರ್ ನೀರಿಗೆ ಜೊತೆಗೆ ಬೆರೆಸಿ ಸಿಂಪಡಿಸುವುದು. ವಾರದ ನಂತರ 20 ಮೀಮೀ ಪೆÇ್ರೀಪಾನಪಾಸ್, 30 ಗ್ರಾಂ ಕಾಫರ್ ಆಕ್ಸಿ ಕ್ಲೋರೈಡ್, 20 ಮಿಮಿ ಬೇವಿನ ಎಣ್ಣೆ 10 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಇದೇ ಸಂದರ್ಭದಲ್ಲಿ 75 ಗ್ರಾಂ ಮಾವು ಸ್ಪೆಷಲ್ 15 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದು. ಇದರಿಂದ ರೋಗ ನಿಯಂತ್ರಣ ಬರುತ್ತದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ವರ್ಷ ಮಾವು ಬೆಳೆಗಳಿಗೆ ಏನಾದರೂ ಒಂದು ರೋಗ ಅಂಟಿಕೊಂಡಿರುತ್ತದೆ. ಇದನ್ನು ನಿಯಂತ್ರಣ ಮಾಡಲು ಔಷಧಿ ಸಿಂಪಡಣೆ ಮಾಡಲಾಗಿದೆ. ಸರಕಾರ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಮಾವು ಬೆಳೆಗಾರರು ಶಿವಪ್ಪ ಪೂಜಾರ ಮತ್ತು ನಿಂಗಪ್ಪ ಪೂಜಾರ ತಮ್ಮ ಅಳಲು ತೋಡಿಕೊಂಡರು.