
ಚಿಂಚೋಳಿ,ನ.1-ಮಾವನನ್ನು ಕೊಂದು ಅಳಿಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚೋಳಿ ತಾಲ್ಲೂಕಿನ ಚಿಂತಪಳ್ಳಿ ಗ್ರಾಮದಲ್ಲಿ ನಡೆದಿದೆ.
ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬರ್ಸಿ ತಾಲ್ಲೂಕಿನ ಭೋಯಿಂಚಿ ಗ್ರಾಮದ ಗೋರಖ್ ಗಾಯಕವಾಡ (29) ಎಂಬಾತನೆ ಮಾವ ಈರಪ್ಪ ಬೊಕೆ (65) ಅವರನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಚಿಂಚೋಳಿ ತಾಲ್ಲೂಕಿನ ಚಿಂತಪಳ್ಳಿ ಗ್ರಾಮದ ಈರಪ್ಪ ಬೊಕೆ ಅವರ ಮಗಳು ವೈಶಾಲಿಯನ್ನು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಬರ್ಸಿ ತಾಲ್ಲೂಕಿನ ಗೋರಖ್ ಗಾಯಕವಾಡ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ಮೇಲೆ 5 ತಿಂಗಳು ಗಂಡನ ಮನೆಯಲ್ಲಿದ್ದ ವೈಶಾಲಿ ಗಂಡ ಸರಿಯಾಗಿ ನೋಡಿಕೊಳ್ಳದ ಕಾರಣ 15 ದಿನಗಳ ಹಿಂದೆ ತವರು ಮನೆಗೆ ಬಂದಿದ್ದಳು. ಪತ್ನಿಯನ್ನು ಕರೆಯಲು ಮೂರು ದಿನಗಳ ಹಿಂದೆ ಮಾವನ ಮನೆಗೆ ಬಂದಿದ್ದ ಗೋರಖ್ ತನ್ನ ಹೆಂಡತಿಯನ್ನು ತನ್ನೊಂದಿಗೆ ಕಳುಹಿಸಿಕೊಡುವಂತೆ ತಕರಾರು ಮಾಡಿದ್ದ. ದೀಪಾವಳಿ ಹಬ್ಬ ಆದ ಮೇಲೆ ಕಳುಹಿಸಿಕೊಡುವುದಾಗಿ ಹೇಳಿದರೂ ಕೇಳದೆ ಈಗಲೇ ಕಳುಹಿಸಿಕೊಡುವಂತೆ ಪಟ್ಟು ಹಿಡಿದಿದ್ದ. ಅ.31 ರಂದು ಬೆಳಿಗ್ಗೆ ಮಾವ ಈರಪ್ಪ ಬೊಕೆ ಮತ್ತು ಅಳಿಯ ಗೋರಖ್ ಗ್ರಾಮದ ಬಸವರಾಜ ಹೊಸಮನಿ ಎಂಬುವವರ ಹೊಲಕ್ಕೆ ಹೋಗಿದ್ದಾರೆ. ಅಲ್ಲಿ ಮಾವ-ಅಳಿಯನ ನಡುವೆ ತಕರಾರು ನಡೆದು ಗೋರಖ್ ಸಿಟ್ಟಿನಲ್ಲಿ ಮಾವ ಈರಪ್ಪ ಬೋಕೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ನಂತರ ಚಿಂತಪಳ್ಳಿಗೆ ಬಂದು ವಿದ್ಯುತ್ ಕಂಬ ಏರಿ ವಿದ್ಯುತ್ ತಂತಿ ಹಿಡಿದು ಶಾಕ್ ತಗುಲಿ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಸುದ್ದಿ ತಿಳಿದು ಡಿ.ಎಸ್.ಪಿ. ಕೆ.ಬಸವರಾಜ, ಸಿಪಿಐ ಅಂಬಾರಾಯ ಕಮಾನಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‍ಐ ನಂದಿನಿ ತನಿಖೆ ಕೈಗೊಂಡಿದ್ದಾರೆ.