ಮಾಳಿ / ಮಾಲಗಾರ ಪ್ರತ್ಯೇಕ ನಿಗಮ ಘೋಷಣೆ ಮಾಡಿ : ಸಿ ಬಿ ಕುಲಗೊಡೆ ಸರ್ಕಾರಕ್ಕೆ ಎಚ್ಚರಿಕೆ

ಅಥಣಿ : ಮಾ.9:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೊದಲು ಘೋಷಿಸಿರುವಂತೆ ಪ್ರತ್ಯೇಕ ಮಾಳಿ ಮಾಲಗಾರ ಅಭಿವೃದ್ಧಿ ನಿಗಮ ಮರು ಸ್ಥಾಪಿಸಬೇಕು ಇಲ್ಲದೇ ಹೋದಲ್ಲಿ ಸರಕಾರದ ನಿರ್ಧಾರದ ವಿರುದ್ಧ ಸಿಡಿದೇಳುವುದು ಅನಿವಾರ್ಯವಾಗುತ್ತದೆ ಎಂದು ಮಾಳಿ ಮಾಲಗಾರ ಸಮಾಜದ ಮುಖಂಡ ಸಿ. ಬಿ. ಕುಲಗೊಡ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಅವರು ಸ್ಥಳೀಯ ಹೊನ್ನೊಳ್ಳಿ ಮುತ್ಯಾ ದೇವಸ್ಥಾನದಲ್ಲಿ ರಾಜ್ಯ ಸರಕಾರದ ನಿರ್ಧಾರ ವಿರೋಧಿಸಿ ಮಾಳಿ ಮಾಲಗಾರ ಸಮಾಜ ಬಂಧುಗಳು ಹಮ್ಮಿಕೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡುತ್ತಾ ರಾಜ್ಯದಲ್ಲಿ ಸುಮಾರು 30 ರಿಂದ 35 ಲಕ್ಷ ಜನಸಂಖ್ಯೆ ಹೊಂದಿರುವ ಮಾಳಿ ಮಾಲಗಾರ ಸಮಾಜ ಬಂಧುಗಳು ಕಳೆದ ಅನೇಕ ವರ್ಷಗಳಿಂದ ಸಮಾಜದ ಅಭಿವೃದ್ಧಿಗಾಗಿ ಪ್ರತ್ತೇಕ ನಿಗಮ ಸ್ಥಾಪಿಸಬೇಕು ಎಂದು ಹೋರಾಡುತ್ತಲೇ ಬಂದಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಿ ಮಾಳಿ ಮಾಲಗಾರ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಮುಗುಳಖೋಡದ ರಾಜ್ಯ ಮಟ್ಟದ ಮಾಳಿ ಸಮಾವೇಶದಲ್ಲಿ ಭಾಗವಹಿಸಿ ಭರವಸೆ ನೀಡಿದ್ದರು, ಆದರೂ ಕೂಡ ಬಜೆಟ್‍ನಲ್ಲಿ ಅಭಿವೃದ್ಧಿ ನಿಗಮ ಸ್ಥಾಪಿಸಲೇ ಇಲ್ಲ ಎಂದ ಅವರು ಸಮಾಜದ ಬಂಧುಗಳೆಲ್ಲರೂ ಕೂಡಿ ನಮಗೆ ಸಹಕಾರ ನೀಡಿದ ಲಕ್ಷ್ಮಣ ಸವದಿ, ಶ್ರೀಮಂತ ಪಾಟೀಲ, ಪಿ.ರಾಜೀವ, ಬಾಲಚಂದ್ರ ಜಾರಕಿಹೊಳಿ, ಮಹೇಶ ಕುಮಠಳ್ಳಿ ಸೇರಿದಂತೆ ಎಲ್ಲರನ್ನು ಭೇಟಿ ಮಾಡಿ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ ಪರಿಣಾಮ ಮುಖ್ಯಮಂತ್ರಿಗಳು ಮಾಳಿ ಮಾಲಗಾರ ಸಮಾಜಕ್ಕೆ ಪ್ರತ್ತೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ಘೋಷಣೆ ಮಾಡಿದಾಗ ನಮ್ಮ ಸಮಾಜದ ಬಂಧುಗಳು ಸಂತೋಷ ಪಟ್ಟಿದ್ದರು ಎಂದರು.

ಮುಖ್ಯಮಂತ್ರಿಗಳ ಆದೇಶವೇ ಅಂತಿಮ ಎಂದು ಭಾವಿಸಿದ ನಮಗೆ ಫೆ.21 ರಂದು ಏಕಾಏಕಿ ಮಾಳಿ ಮಾಲಗಾರ ಸಮಾಜದ ಜೊತೆಗೆ ಇನ್ನೂಳಿದ 9 ಸಮಾಜಗಳನ್ನು ಜೋಡಿಸಿರುವ ವಿಷಯ ನಮಗೆ ಗೊತ್ತಾದ ತಕ್ಷಣ ಮತ್ತೆ ನಮಗೆ ಬೆಂಬಲ ನೀಡಿದ ಮುಖಂಡರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನು ಭೇಟಿ ಮಾಡಿ, ಅಧಿಕಾರಿಗಳು ಹೊರಡಿಸಿದ ಆದೇಶ ಪ್ರತಿಯಲ್ಲಿ ನಮ್ಮ ಸಮಾಜದ ಜೊತೆಗೆ ಹೂಗಾರ, ಹೂವಾಡಿಗ, ಫೂಲ್ ಮಾಲಿ ಸೇರಿದಂತೆ 9 ಸಮಾಜಗಳನ್ನು ಜೊಡಿಸಿರುವುದು ಸರಿಯಾದ ನಿರ್ಧಾರ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟಾಗ ಮುಖ್ಯಮಂತ್ರಿಗಳು ತಿದ್ದುಪಡಿ ಮಾಡಿಸಿ ಮಾಳಿ ಸಮಾಜಕ್ಕೆ ಮಾತ್ರ ಪ್ರತ್ಯೇಕ ನಿಗಮ ಸ್ಥಾಪಿಸುವ ಮರುಆದೇಶ ಹೊರಡಿಸುತ್ತೇನೆ ಎಂದು ಭರವಸೆ ನೀಡಿ 15 ದಿನಗಳು ಕಳೆದರೂ ಕೂಡ ಇಲ್ಲಿಯವರೆಗೂ ಮರು ಆದೇಶ ಬಂದಿಲ್ಲ. ಎಂದ ಅವರು ಇದರಿಂದ ರಾಜ್ಯ ಸರಕಾರದ ವಿರುದ್ಧ ನಮ್ಮ ಸಮಾಜ ಬಂಧುಗಳಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ಚುನಾವಣೆ ಘೋಷಣೆ ಪೂರ್ವದಲ್ಲಿಯೇ ಮಾಳಿ ಮಾಲಗಾರ ಪ್ರತ್ತೇಕ ನಿಗಮ ಸ್ಥಾಪಿಸುವ ಸಂಬಂಧ ಮರುಆದೇಶ ರಾಜ್ಯ ಸರಕಾರ ಹೊರಡಿಸದೇ ಹೋದಲ್ಲಿ ನಮ್ಮ ಸಮಾಜ ಒಕ್ಕೂರಲಿನಿಂದ ಕಠಿಣ ನಿರ್ಧಾರ ಕೈಗೊಳ್ಳಲಿದೆ ಎಂದು ಎಚ್ಚರಿಸಿದರು.

ಮಾಜಿ ಜಿ.ಪಂ ಸದಸ್ಯ ಶಿವಾನಂದ ದಿವಾನಮಳ ಮಾತನಾಡಿ, ರಾಜ್ಯದ 8 ಜಿಲ್ಲೆಗಳಲ್ಲಿ ಸುಮಾರು 35 ಲಕ್ಷ ಜನಸಂಖ್ಯೆ ಹೊಂದಿರುವ ಮಾಳಿ ಮಾಲಗಾರ ಸಮಾಜಕ್ಕೆ ಪ್ರತ್ತೇಕ ನಿಗಮ ಸ್ಥಾಪಿಸದ ರಾಜ್ಯ ಸರಕಾರ ಕೇವಲ 1 ರಿಂದ 2 ಲಕ್ಷ ಜನಸಂಖ್ಯೆ ಹೊಂದಿರುವ ಹಡಪದ, ಮೇದಾರ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಿದೆ ಎಂದ ಅವರು ಮಾಳಿ ಮಾಲಗಾರ ಸಮಾಜದ ಅಭಿವೃದ್ಧಿಗೂ ಪ್ರತ್ತೇಕ ನಿಗಮ ಸ್ಥಾಪಿಸಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದರು.

ಮಾಳಿ ಮಾಲಗಾರ ಸಮಾಜ ಸಂಘಟನೆಯ ರಾಜ್ಯ ಅಧ್ಯಕ್ಷ ಕಾಡು ಮಾಳಿ ಮಾತನಾಡಿ, ನಮ್ಮ ಸಮಾಜದ ಅಭಿವೃದ್ಧಿಗೆ ನಿಗಮ ಸ್ಥಾಪನೆಯಾದಾಗ ನಮ್ಮ ಸಮಾಜ ಸಂತೋಷ ಪಟ್ಟಿತ್ತು ಆದರೆ ಕೆಲವೇ ದಿನಗಳಲ್ಲಿ 9 ಸಮಾಜಗಳನ್ನು ಜೋಡಿಸಿರುವುದು ವಿಷಾದದ ಸಂಗತಿ ಎಂದ ಅವರು ಹೂಗಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಲು ನಮ್ಮ ವಿರೋಧ ಇಲ್ಲ ಆದರೆ ಮಾಳಿ ಮಾಲಗಾರ ನಿಗಮವನ್ನು ಪ್ರತ್ಯೇಕಗೊಳಿಸಿ ಎಂದು ಆಗ್ರಹಿಸಿದರು.

ಸಮಾಜದ ಮುಖಂಡರಾದ ಬಸವರಾಜ ಬಾಳಿಕಾಯಿ, ಗಿರೀಶ ಬುಟಾಳಿ ಮಾತನಾಡಿದರು. ಹೋರಾಟದಲ್ಲಿ ಮಲ್ಲೇಶ ಹುದ್ದಾರ, ಶ್ರೀಶೈಲ ಹಳ್ಳದಮಳ, ಮಹಾಂತೇಶ ಮಾಳಿ, ಪ್ರಶಾಂತ ತೋಡಕರ್, ನರಸು ಬಡಕಂಬಿ, ಸುಭಾಷ ಮಾಳಿ, ರಮೇಶ ಮುಕರಿ, ಪರಶುರಾಮ ಸೊನಕರ, ರವಿ ಕುರಬೆಟ್ಟ, ಸಂಜು ಮಾಳಿ, ದತ್ತಾ ಮಾಳಿ, ಶಿವಾನಂದ ಹಲವೇಗಾರ, ಮಹಾದೇವ ಚಮಕೇರಿ ಸೇರಿದಂತೆ ಇತರ ಮಾಳಿ ಸಮಾಜ ಬಂಧುಗಳು ಭಾಗವಹಿಸಿದ್ದರು.