ಮಾಲ್ವಿ ಜಲಾಶಯಕ್ಕೆ 10 ಅಡಿ ನೀರು
ರೈತರ ಮೊಗದಲ್ಲಿ ಮೂಡಿದ ಮಂದಹಾಸ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.03 ಮಳೆಗಾಲದಲ್ಲಿ  ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾದರೂ ಮಾಲ್ವಿ ಜಲಾಶಯ ದಶಕಗಳಿಂದ ಭರ್ತಿಯಾಾಗದೆ ರೈತರ ಮೊಗದಲ್ಲಿ ನಿರಾಶೆ  ಮೂಡಿಸಿತ್ತು. ಈ ವರ್ಷ ಮಳೆಯ ನೀರು ಮತ್ತು ಶಾಶ್ವತ ನೀರು ಸೇರಿದಂತೆ ಜಲಾಶಯಕ್ಕೆ  10 ಅಡಿ ನೀರು  ಬಂದಿದೆ.
ಬಹು ವರ್ಷಗಳ ಬೇಡಿಕೆಯಾಗಿದ್ದ ಜಲಾಶಯಕ್ಕೆ ಶಾಶ್ವತ ನೀರಿನ ಯೋಜನೆ, ಈ ವರ್ಷ ಕಾರ್ಯರೂಪಕ್ಕೆ ಬಂದಿರುವುದು ತಾಲೂಕಿನ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
 ತಾಲೂಕಿನ ಜೀವನಾಡಿ ಮಾಲ್ವಿ ಜಲಾಶಯ 70 ದಶಕದಲ್ಲಿ ಆಗಿನ ಸರಳ ಸಜ್ಜನಿಕೆಯ  ಶಾಸಕರಾದ ಬಾಚಿಗೊಂಡನಹಳ್ಳಿ ದಿ.ಚನ್ನಬಸವನಗೌಡರ ಹೋರಾಟದ ಫಲದಿಂದ ಹಿರೇಹಳ್ಳಕ್ಕೆ  ರೈತರಿಗೆ ಅನುಕೂಲವಾಗಲು ಡ್ಯಾಂ  ನಿರ್ಮಾಣಗೊಂಡಿತ್ತು.. ಕೆಲವು ವರ್ಷಗಳ ಕಾಲ ಮಳೆಯಿಂದ ತುಂಬಿಕೊಂಡು ಜೀವ ಕಳೆ ಮೂಡಿಸಿತ್ತು. ಬರು  ಬರುತ್ತಾ ಮಳೆಯ ಕೊರತೆ ಜೊತೆಗೆ ಜಲಾಶಯದ ಮೂಲ ನಶಿಸಿ ಹೋದ ಕಾರಣ ಜಲಾಶಯಕ್ಕೆ ಹರಿಯುವ  ನೀರಿನ ಪ್ರಮಾಣ ಕಡಿಮೆಯಾಗಿ ರೈತರು  ನಿರಾಶೆಗೊಳಗಾಗಿದ್ದರು.
 ಜಲಾಶಯಕ್ಕೆ ಶಾಶ್ವತ ನೀರಿಗಾಗಿ ಅನೇಕ ಜನ ಪ್ರತಿನಿಧಿಗಳು ರೈತರು, ಕನ್ನಡಪರ  ಹೋರಾಟಗಾರರು ಮಠಾಧೀಶರು ನಿರಂತರ ಹೋರಾಟ ಮಾಡುತ್ತಾ  ಬಂದಿದ್ದರು. ಆದರೆ ಯಾವುದೇ ಸರ್ಕಾರ ಯೋಜನೆಯನ್ನು ಕಾರ್ಯರೂಪಕ್ಕೆ ತರವಲ್ಲಿ ಆಸಕ್ತಿ ತೋರಲಿಲ್ಲ. ಇದನ್ನು ಶಾಸಕ ಭೀಮ ನಾಯ್ಕ್ ಹಿಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಬೆನ್ನು ಬಿದ್ದು ಯೋಜನೆಯನ್ನು ಕಾರ್ಯರೂಪಕ್ಕೆ ತರವಲ್ಲಿ ಯಶಸ್ವಿಯಾದರು. ಇವರ ನಿರಂತರ ಪ್ರಯತ್ನ ಹೋರಾಟದ ಫಲದಿಂದ  ಜಲಾಶಯ ಶಾಶ್ವತ ನೀರು ರೈತರು ಕಾಣುವಂತಾಯಿತು.
 ಮಳೆಯ ನೀರು  ಹಾಗೂ ಶಾಶ್ವತ ನೀರು ಸೇರಿದರೆ ಜಲಾಶಯದ ಮೆರೆಗೂ ಹೆಚ್ಚಾಗುತ್ತದೆ ಈ ಭಾಗದ ರೈತರ ಹೋರಾಟಗಾರರ ನಿದ್ದೆಗೆಡಿಸಿದ್ದ ಈ ಜಲಾಶಯ ಈಗ ನೆಮ್ಮದಿಯಲ್ಲಿ ನಿದ್ದೆ ಮಾಡುವಂತ ವಾತಾವರಣ ನಿರ್ಮಾಣವಾಗಿದೆ.
 ಪ್ರತಿ ಚುನಾವಣೆಯಲ್ಲಿಯೂ ಅಸ್ತ್ರವಾಗಿ ಬಳಕೆಯಾಗುತ್ತಿದ್ದ ಮಾಲವಿ  ಜಲಾಶಯ ಈ ಬಾರಿ ಚುನಾವಣೆಯಲ್ಲಿ ಬಳಕೆಯಾಗದೇ ಇರುವುದು ಮತದಾರರು ನಿಟ್ಟುಸಿರು ಬಿಟ್ಟಿದ್ದಾರೆ.
 ಜಲಾಶಯ ಈ ವರ್ಷ ತುಂಬಿದರೆ ಈ ಭಾಗದ ಜನರಿಗೆ ಪ್ರವಾಸಿ ತಾಣವಾಗಿ ಕೈಬೀಸಿ ಕರೆಯುತ್ತದೆ. ಡ್ಯಾಂ ಸುತ್ತಮುತ್ತ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ವಚ್ಛ ಮಾಡುವ ಮೂಲಕ ಗಿಡ ಮರ ಆಕರ್ಷಿತ ಸಲಕರಣೆಗಳನ್ನು ಅಳವಡಿಸಿ ಪ್ರವಾಸಿಗರನ್ನು ಮನ ಸೆಳೆಯುವಂತೆ ನಿರ್ಮಿಸಬೇಕು.