ಮಾಲೂರು ಪುರಸಭೆ ಚುನಾವಣೆ ಮುಂದೂಡಿದರೆ ಹೋರಾಟ

ಕೋಲಾರ,ನ,೯-ಲೋಕಸಭಾ ಸದಸ್ಯರಾದ ಎಸ್.ಮುನಿಸ್ವಾಮಿಯವರ ಒತ್ತಡಕ್ಕೆ ಮಣಿದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾಲೂರು ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನ ೧೦ಕ್ಕೆ ನಿಗದಿಒ ಪಡಿಸಿರುವುದನ್ನು ಮುಂದೂಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಚುನಾವಣೆ ಮುಂದೂಡಲು ಸರ್ಕಾರವು ಅನುಮತಿಸಿದಲ್ಲಿ ಕಾನೂನು ಹೋರಾಟದ ಜತೆಗೆ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಕೆ.ವೈ.ನಂಜೇಗೌಡ ಎಚ್ಚರಿಸಿದರು
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರಸಭೆಯ ೨೮ ಸ್ಥಾನಗಳಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿತ್ತು. ಕಾಂಗ್ರೆಸ್ ೧೧, ಜೆಡಿಎಸ್ ೧,ಪಕ್ಷೇತರರ ೫ ಸದಸ್ಯರಲ್ಲಿ ಮೂವರು ಕಾಂಗ್ರೆಸ್ ಬೆಂಬಲಕ್ಕಿದ್ದರು. ಬಿಜೆಪಿ ೧೦ ಸ್ಥಾನ ಗಳಿಸಿದೆ ಎಂದರು.
ಕಳೆದ ಒಂದೂವರೆ ವರ್ಷದ ನಂತರ ಕೋರ್ಟ್ ಸೂಚನೆ ಮೇರೆಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿ ನ.೧೦ ರೊಳಗೆ ಪ್ರಕ್ರಿಯೆ ಮುಗಿಸಬೇಕಾಗಿರುವ ಹಿನ್ನಲೆಯಲ್ಲಿ ಚುನಾವಣೆಯನ್ನು ನ.೫ಕ್ಕೆ ನಿಗದಿ ಪಡಿಸ ಬೇಕಾಗಿತ್ತು ಅದರೆ ಚುನಾವಣೆಯನ್ನು ಆಪರೇಷನ್ ಕಮಲಕ್ಕೆ ನಡೆಸಲು ಕಾಲಾವಕಾಶಕ್ಕಾಗಿ ನ.೧೦ಕ್ಕೆ ಮುಂದೂಡಲಾಗಿತ್ತು ಎಂದರು.
ಈ ಮಧ್ಯೆ ಬಿಜೆಪಿ ಸದಸ್ಯರೊಬ್ಬರನ್ನು ಅಪಹರಿಸಿರುವ ಬಗ್ಗೆ ತಾಲೂಕು ಬಿಜೆಪಿ ಅಧ್ಯಕ್ಷರು ಠಾಣೆಗೆ ದೂರಿದ್ದಾರೆ. ಎರಡನೇ ಬಾರಿ ಸದಸ್ಯನಾಗಿದ್ದರೂ ಪಕ್ಷದ ನಾಯಕರು ಸರಿಯಾಗಿ ನಡೆಸಿಕೊಂಡಿಲ್ಲ. ತಮ್ಮನ್ನು ಯಾರೂ ಅಪಹರಿಸಿಲ್ಲ,ಬಟ್ಟೆ ವ್ಯಾಪಾರಕ್ಕೆಂದು ಹೋಗಿದ್ದಾಗಿ ಸ್ವತಃ ಸದಸ್ಯರೇ ವೀಡಿಯೋ ಮಾಡಿ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್‌ಗೆ ಕಳುಹಿಸಿದ್ದಾರೆ. ಎಫ್‌ಐಆರ್ ದಾಖಲಿಸಲು ಅಪಹರಣ ಬಗ್ಗೆ ಸದಸ್ಯರು ಅಥವಾ ಅವರ ಕುಟುಂಬಸ್ಥರಾಗಲಿ ದೂರು ನೀಡಿಲ್ಲ ಎಂದು ನುಡಿದರು.
ಗೆಲ್ಲಲು ಸಂಖ್ಯಾಬಲ ಇಲ್ಲದೆ ಚುನಾವಣೆಯೇ ನಡೆಸಬಾರದೆಂದು ಸಂಸದ ಮುನಿಸ್ವಾಮಿ ಅಧಿಕಾರ ಹಿಡಿಯಲು ವಾಮಮಾರ್ಗಕ್ಕಿಳಿದು ಚುನಾವಣೆ ಮುಂದೂಡಲು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಇದಕ್ಕೆ ಮಣಿದ ಜಿಲ್ಲಾಧಿಕಾರಿ ಚುನಾವಣೆ ಮುಂದೂಡಲು ನಿರ್ದೇಶನ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅಧಿಕಾರಿಗಳು ಕಾನೂನು,ಸಂವಿಧಾನಕ್ಕೆ ಬದ್ದರಾಗಿ ಕೆಲಸ ಮಾಡಬೇಕೇ ವಿನಃ ಸಚಿವರು ಸಂಸದರ, ಶಾಸಕರ ಕೈಗೊಂಬೆ ಆಗಬಾರದು ಎಂದು ಹೇಳಿದರು.
ಅಧಿಕಾರ ಹಿಡಿಯಲು ಕಾಂಗ್ರೆಸ್‌ಗೆ ೧೫ ಹಾಗೂ ತಮ್ಮ ಮತ ಸೇರಿ ೧೬ ಸದಸ್ಯ ಬಲ ಇದೆ. ಇವರ್‍ಯಾರನ್ನೂ ಬಿಜೆಪಿ ಖರೀದಿಸಲು ಸಾಧ್ಯವಿಲ್ಲ, ಬಿಜೆಪಿ ಸದಸ್ಯರನ್ನು ಸೆಳೆಯುವ ಅವಶ್ಯಕತೆಯೂ ನಮಗಿಲ್ಲ. ಬಿಜೆಪಿ ಅಧಿಕಾರಿಗಳ ಮೂಲಕ ಸದಸ್ಯರುಗಳಿಗೆ ಬೆದರಿಕೆ ಹಾಕಿಸುತ್ತಿದ್ದಾರೆಂದು ಆರೋಪಿಸಿದರು,
ಚುನಾವಣೆ ಮುಂದೂಡಿದಲ್ಲಿ ಅಧಿಕಾರಿಗಳ ವಿರುದ್ದ ಕಾನೂನು ಹೋರಾಟ ಹಾಗೂ ಬಿಜೆಪಿ ವಿರುದ್ದ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಬಂಗಾರಪೇಟೆ ಪುರಸಭೆ ಮತ್ತು ಕೆಜಿಎಫ್ ನಗರಸಭೆಯಲ್ಲಿ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿದಿದೆ. ಮಾಲೂರಿನಲ್ಲೂ ಪಕ್ಷ ಗದ್ದುಗೆ ಏರಲಿದೆ. ಇದನ್ನು ತಪ್ಪಿಸಲು ಸಂಸದ ಮುನಿಸ್ವಾಮಿ ಚುನಾವಣೆ ಮುಂದೂಡಲು ಅಧಿಕಾರಿಗಳ ಮೂಲಕ ಪ್ರಯತ್ನಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಸಂಸದರು ಹೋದ ಕಡೆಯಲ್ಲೆಲ್ಲ ಘೇರಾವ್ ಹಾಕಬೇಕಾಗುತ್ತದೆ, ಮುಂದೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ನುಡಿದರು.