ಮಾಲಿನ್ಯ ರಹಿತ ವಾತಾವರಣ ಸೃಷ್ಟಿಗೆ ವಿದ್ಯುತ್ ಒಂದೇ ಪರಿಹಾರ: ಸಚಿವ ನಾಗೇಶ್

ತುಮಕೂರು, ಜು. ೨೭- ಇಂದು ನಾವು ನವೀಕರಿಸಬಹುದಾದ ಶಕ್ತಿಯ ಮೂಲದಿಂದ ೧,೬೩,೦೦೦ ಮೆ.ವ್ಯಾಟ್ ವಿದ್ಯುತ್‌ನ್ನು ಉತ್ಪಾದಿಸುತ್ತಿದ್ದೇವೆ. ನಾವು ಪ್ರಪಂಚದಲ್ಲೇ ಅತಿ ವೇಗವಾಗಿ ವಿದ್ಯುತ್ ಉತ್ಪಾದಿಸುವ ಸಲಕರಣೆಗಳನ್ನು ಸ್ಥಾಪಿಸುತ್ತಿದ್ದೇವೆ ಎಂದು ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರಾದ ಬಿ.ಸಿ. ನಾಗೇಶ್ ಹೇಳಿದರು.
೨೦೩೦ಕ್ಕೆ ನವೀಕರಿಸಬಹುದಾದ ಶಕ್ತಿಯ ಮೂಲದಿಂದ ನಮ್ಮ ಉತ್ಪಾದನಾ ಸಾಮರ್ಥ್ಯವು ಶೇ. ೪೦ ರಷ್ಟಾಗಿದ್ದು, ಈ ಗುರಿಯನ್ನು ನಾವು ಈಗಾಗಲೇ ನವೆಂಬರ್ ೨೦೨೧ರಲ್ಲೇ ಸಾಧಿಸಿದ್ದೇವೆ. ಹೀಗಾಗಿ ನಿಗದಿತ ಸಮಯಕ್ಕಿಂತ ೯ ವರ್ಷಗಳ ಮುಂಚಿತವಾಗಿ ಗುರಿಯನ್ನು ಸಾಧಿಸಿದ್ದೇವೆ ಎಂದರು.
ತಿಪಟೂರು ತಾಲ್ಲೂಕಿನ ನೊಣವಿನಕೆರೆಯಲ್ಲಿ ’ಉಜ್ವಲ ಭಾರತ ಉಜ್ವಲ ಭವಿಷ್ಯ ವಿದ್ಯುಚ್ಛಕ್ತಿ @ ೨೦೪೭ ವಿದ್ಯುತ್ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಹಿಂದೆ ವಿದ್ಯುತ್ ಸಂಪರ್ಕ ಇಲ್ಲದೆ ರೈತರು ಪರದಾಡುವಂತಾಗಿತ್ತು. ದೇಶದ ೩೬ ಸಾವಿರಕ್ಕಿಂತ ಹೆಚ್ಚು ಹಳ್ಳಿಗಳು ವಿದ್ಯುತ್ ಕಂಡಿರಲಿಲ್ಲ. ಪ್ರಧಾನಿ ಮೋದಿಯವರು ಗ್ರಾಮೀಣ ವಿದ್ಯುದ್ದೀಕರಣ ಸಭೆಗಳನ್ನು ಕಾಲಕಾಲಕ್ಕೆ ನಡೆಸಿದ ಕಾರಣ ಇಂದು ಹಲವಾರು ಯೋಜನೆಗಳ ಮೂಲಕ ೫ ವರ್ಷಗಳಲ್ಲಿ ದೇಶದ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಇದೀಗ ದೇಶದ ಎಲ್ಲ ಹಳ್ಳಿಗಳಲ್ಲಿ ವಿದ್ಯುತ್ ಸರಬರಾಜು ಆಗಿರುವುದು ಹೆಮ್ಮೆಯ ಸಂಗತಿ ಎಂದರು.
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೇ ವಿದ್ಯುತ್ ಉತ್ಪಾದನೆ ಮಾಡಿದರೂ ವಿದ್ಯುತ್ ಕೊರತೆ ಇರುವ ರಾಜ್ಯಗಳಿಗೆ ವಿತರಣೆ ಮಾಡಲಾಗುತ್ತಿದೆ. ದೇಶದಲ್ಲಿ ವಿದ್ಯುತ್ ಲಭ್ಯತೆ ಹೆಚ್ಚಿರುವ ಕಾರಣ ಜಗತ್ತಿನ ಹಲವು ಸಂಸ್ಥೆಗಳು ದೇಶದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಕಳೆದ ೬೫ ವರ್ಷಗಳಲ್ಲಿ ಮಾಡದ ವಿದ್ಯುತ್ ಉತ್ಪಾದನೆಯನ್ನು ನಾವಿಂದು ೧೦ ವರ್ಷಗಳಲ್ಲಿ ಸಾಧಿಸಿದ್ದೇವೆ ಎಂದರು.
ಕೈಗಾರಿಕೆಗಳಿಗೆ, ರೈತರ ಹೊಲಗಳಿಗೆ, ಮನೆಗಳಿಗೆ, ವಿದ್ಯುತ್ ನೀಡಬೇಕೆಂಬ ಕಾರಣ ಅಸಾಂಪ್ರದಾಯಿಕ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗುತ್ತಿದೆ. ಹೊಸ ಆಧುನಿಕ ತಂತ್ರಜ್ಞಾನ ಬಳಸಿ ವಿದ್ಯುತ್ ಉತ್ಪಾದನೆ ಮಾಡುವುದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟಿಗಟ್ಟಲೆ ಅನುದಾನ ನೀಡುತ್ತಿವೆ ಎಂದರು.
ಮಾಲಿನ್ಯ ರಹಿತ ವಾತಾವರಣ ಸೃಷ್ಟಿಗೆ ವಿದ್ಯುತ್ ಒಂದೇ ಪರಿಹಾರವಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡಿ ಎಲ್ಲರ ಆರೋಗ್ಯವನ್ನು ಕಾಪಾಡುವ ಧ್ಯೇಯವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹೊಂದಿವೆ. ಉಜ್ವಲ ಯೋಜನೆಯ ಮೂಲಕ ಅರ್ಹ ಫಲಾನುಭವಿಗಳ ಮನೆಗಳಿಗೆ ಅನಿಲ ಸಂಪರ್ಕ, ಬೆಳಕು ಯೋಜನೆಯ ಮೂಲಕ ಬಡವರ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡುವ ಮೂಲಕ ಮಾಲಿನ್ಯ ಕಡಿಮೆ ಮಾಡಲು ಮತ್ತು ವಿದ್ಯತ್ ವಾಹನಗಳ ರೀಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ ಎಂದು ವಿವರಿಸಿದರು.
ರೂಫ್ ಟಾಪ್ ಸೋಲಾರ್ ಘಟಕವನ್ನು ಎಲ್ಲರೂ ಅಳವಡಿಸಿಕೊಳ್ಳುವಂತಾಗಬೇಕು. ಸೋಲಾರ್ ಹೀಟರ್ ಬಳಸುವ ಮೂಲಕ ವಿದ್ಯುತ್ ಉಳಿಸಿ, ಉಳಿಸಿದ ವಿದ್ಯುತ್‌ನ್ನು ದೇಶದ ಸದ್ಭಳಕೆಗೆ ಬಳಸಲು ಎಲ್ಲರೂ ಕೈ ಜೋಡಿಸಬೇಕು ಎಂದ ಅವರು, ಈ ವರ್ಷದ ಅಕ್ಟೋಬರ್ ವೇಳೆಗೆ ಅರಸೀಕೆರೆವರೆಗೂ ವಿದ್ಯುತ್ ಮಾರ್ಗ ವಿಸ್ತರಣೆ ಆಗಿ ಚಾಲನೆಗೆ ಬರಲಿದೆ ಎಂದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಅಸಾಂಪ್ರದಾಯಿಕ ವಿಧಾನಗಳಾದ ಸೌರಶಕ್ತಿ, ಪವನ ಶಕ್ತಿಯಿಂದ ವಿದ್ಯುತ್ ಉತ್ಪಾದನೆ ಮಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ೨೦೪೭ರ ವೇಳೆಗೆ ಈ ನಿಟ್ಟಿನಲ್ಲಿ ಸಂಪೂರ್ಣ ಗುರಿ ಸಾಧಿಸುವುದು ಸರ್ಕಾರಗಳ ಉದ್ದೇಶವಾಗಿದೆ ಎಂದರು.
ಬೆಳಕು ಅಥವಾ ವಿದ್ಯುತ್ ಇಲ್ಲದೆ ಯಾವ ಕಾರ್ಖಾನೆಯೂ, ಯಾವ ದೇಶ, ಯಾವ ರೈತರು ಸಹ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ವಿದ್ಯುತ್ ಇದ್ದಲ್ಲಿ ಮಾತ್ರ ಬೆಳಕು ಮತ್ತು ಜೀವನ ಎಂದರು.
ಹಿಂದಿನ ವರ್ಷಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ಹೆಚ್ಚಾಗಿತ್ತು. ಟ್ರಾನ್ಸ್‌ಫಾರ್ಮರ್‌ಗಳು ಮೂರು ನಾಲ್ಕು ತಿಂಗಳಾದರೂ ಸಿಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ೨೪ ಗಂಟೆಯೊಳಗಾಗಿ ಟಿ.ಸಿ ನೀಡುವ ವ್ಯವಸ್ಥೆ ಇದೆ ಎಂದರು.
ಪಾವಗಡ ತಾಲ್ಲೂಕಿನಲ್ಲಿ ಈಗಾಗಲೇ ಸೊಲಾರ್ ಪಾರ್ಕ್ ನಿರ್ಮಾಣ ಮಾಡಲಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಫು ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಮುಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.