ಮಾರ್ಚ್ 17 ರಂದು ಪುನೀತ್ ರಾಜಕುಮಾರ್ ಅವರ ಪುತ್ಥಳಿ ಅನಾವರಣ


ಸಂಜೆ ವಾಣಿ ವಾರ್ತೆ
ಕೊಟ್ಟೂರು:ಮಾ,15- ಕರ್ನಾಟಕ ರತ್ನ, ಯುವರತ್ನ, ಎಲ್ಲರ ಮನದಲ್ಲಿ ಅಚ್ಚಳಿಯಾಗಿ ಉಳಿದ  ದಿವಂಗತ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ಇದೇ 17 ರಂದು ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಉದ್ಘಾಟನೆ ಮಾಡಲಾಗುತ್ತದೆ ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಭಾಗವಹಿಸಿ  ಯಶಸ್ವಿಗೊಳಿಸಬೇಕು ಎಂದು ಅಶೋಕ್ ಭೀಮಾ ನಾಯಕ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳು ಮತ್ತು ಇತರರನ್ನು ಕುರಿತು ಮಾತನಾಡಿದರು.
ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ತೆಲಂಗಾಣದಿಂದ ಕರೆತರಲಾಗಿದ್ದು, ಸುಮಾರು ಆರು ತಿಂಗಳ ಸತತ  ತಂದೆಯ ಪ್ರಯತ್ನದಿಂದ ಈ ಪುತ್ಥಳಿಯನ್ನು ನಿರ್ಮಾಣ ಮಾಡಲಾಗಿದ್ದು ಎಂಟು ಅಡಿ ಎತ್ತರದ ಪುನಿತ್ ರಾಜ್ ಕುಮಾರ್ ಅವರ ಪುತ್ಥಳಿಯನ್ನು ಮಾರ್ಚ್ 17 ರಂದು ಅನಾವರಣ ಮಾಡಲಾಗುತ್ತಿದೆ, ಇದರ ಪ್ರಯುಕ್ತ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ, 3:30 ಕ್ಕೆ ಪುತ್ಥಳಿಯ ಮೆರವಣಿಗೆ ಕೈಗೊಳ್ಳಲಾಗುತ್ತದೆ, ಡಿಜೆ ವ್ಯವಸ್ಥೆ, ಧಾರವಾಡದ ಯಂಗ್ ಸ್ಟುಡಿಯೋಸ್ ಇವರಿಂದ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದು ಯಾವುದೇ ರೀತಿಯಾದ ರಾಜಕೀಯ ಕಾರ್ಯಕ್ರಮ ವಾಗಿರುವುದಿಲ್ಲ, ರಾಜಕೀಯ ಬಾವುಟಗಳು ಪ್ರದರ್ಶನ ಇರುವುದಿಲ್ಲ, ಕೇವಲ ಕನ್ನಡ ಧ್ವಜ ಮತ್ತು ಪುನೀತ್ ರಾಜಕುಮಾರ್ ಅವರ ಭಾವಚಿತ್ರವುಳ್ಳ ಬಾವುಟವು ಮಾತ್ರ ಪ್ರದರ್ಶನ ಮಾಡಲಾಗುತ್ತದೆ ಎಂದು ತಿಳಿಸಿದರು.
   ಸೆಪ್ಟೆಂಬರ್ ತಿಂಗಳಲ್ಲಿ ಕೊಟ್ಟೂರಿನಲ್ಲಿ ಪುನೀತ್ ರಾಜಕುಮಾರ್ ಅವರ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಚರ್ಚೆಯನ್ನು ಮಾಡಲಾಗಿತ್ತು, ಆದರೆ ರಸ್ತೆಯ ಕಾಮಗಾರಿ ಮಾಡುತ್ತಿರುವುದರಿಂದ ಸ್ಥಳ ಗೊತ್ತು ಪಡಿಸದೇ ಇರುವುದರಿಂದ ಕಾರಣಂತರಗಳಿಂದ ಪುನೀತ್ ರಾಜಕುಮಾರ್ ಅವರ ಪುತ್ಥಳಿ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ  ನವಂಬರ್ 1 ಅಥವಾ  ಮುಂದಿನ ವರ್ಷದ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಒಳಗಾಗಿ ಪುನೀತ್ ರಾಜಕುಮಾರ್ ಅವರ ಎಂಟು ಅಡಿ ಎತ್ತರದ ಪುತ್ಥಳಿ ನಿರ್ಮಾಣ ಮಾಡುವಂತೆ ಹಾಗೂ ಪಟ್ಟಣದಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಹೆಚ್ಚು ಇರುವ  ವಾರ್ಡ್ ನ್ನು ಗುರುತಿಸಿ ಪುನೀತ್ ರಾಜಕುಮಾರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ತಂದೆಯ ಹತ್ತಿರ ಚರ್ಚೆಯನ್ನು ಮಾಡುತ್ತೇನೆ ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾದ ದಾರುಕೀಶ್, ಬಡಿಗೇರ್ ಕೊಟ್ರೇಶ್, ಕಾರ್ತಿಕ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.