ಮಾರ್ಚ್‌ ಅಂತ್ಯದ ವೇಳೆಗೆ ರಾಜ್ಯದಲ್ಲಿ 800 ಜನೌಷಧಿ ಮಳಿಗೆ: ಡಿವಿಎಸ್

ಬೆಂಗಳೂರು,ಜ.14- ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಗಳ ಸಂಖ್ಯೆಯನ್ನು ಮಾರ್ಚ್ ಅಂತ್ಯದ ವೇಳೆಗೆ  ರಾಜ್ಯದಲ್ಲಿ   800 ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು  ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ರಾಜ್ಯದಲ್ಲಿ ಒಟ್ಟು 788 ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಿದ್ದು, ಕೈಗೆಟುಕುವ ದರದಲ್ಲಿ ಗುಣಮಟ್ಟದ ಜೆನರಿಕ್ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮಾರ್ಚ್ ವೇಳೆಗೆ ಪಿಎಂಬಿಜಿಪಿ ಕೇಂದ್ರಗಳ ಮೂಲಕ 125 ಕೋಟಿ ರೂಪಾಯಿ ಮೊತ್ತದ ಔಷಧಗಳನ್ನು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ

484 ಕೋಟಿ ವಹಿವಾಟು

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ 7064 ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳಲ್ಲಿ 484 ಕೋಟಿ ರೂಪಾಯಿ ಮೊತ್ತದ ದಾಖಲೆ ಪ್ರಮಾಣದ ವಹಿವಾಟು ನಡೆದಿದೆ. ಭಾರತೀಯ ಜನೌಷಧಿ ಮಳಿಗೆಗಳಿಂದ ದೇಶದ  ಎಲ್ಲಾ ಜಿಲ್ಲೆಗಳಲ್ಲಿ ಗುಣಮಟ್ಟದ ಜೆನರಿಕ್ ಔಷಧಿಗಳನ್ನು ಮಾರಾಟ ಮಾಡುತ್ತಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 60 ರಷ್ಟು ಹೆಚ್ಚು ವಹಿವಾಟು ನಡೆದಿದೆ ಎಂದಿದ್ದಾರೆ. 

ಜನೌಷಧಿ ಮಳಿಗೆಗಳಲ್ಲಿ ಔಷಧಿ ಖರೀದಿ ಮಾಡಿದ ಪರಿಣಾಮ ದೇಶದ ಜನರಿಗೆ 3000 ಕೋಟಿ ರೂಪಾಯಿ ಉಳಿತಾಯವಾಗಿದ್ದು, ಜನರಿಗೆ ಹೆಚ್ಚಿನ ರೀತಿಯಲ್ಲಿ ಉಪಯೋಗವಾಗಿದೆ.2019 – 2020 ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಜನೌಷಧಿ ವಲಯಕ್ಕೆ 35.51 ಕೋಟಿ ರೂಪಾಯಿ ಅನುದಾನ ನೀಡಿದ್ದು, ದೇಶವಾಸಿಗಳಿಗೆ 2,600 ಕೋಟಿ ರೂಪಾಯಿ ಉಳಿತಾಯವಾಗಿದೆ ಎಂದರು.

10 ಕೋಟಿ ಸ್ಯಾನಿಟರಿ ಪ್ಯಾಡ್ ವಿತರಣೆ

ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದು ಈ ಉದ್ದೇಶದಿಂದ ಈವರೆಗೆ ಹತ್ತು ಕೋಟಿ ಜನೌಷಧಿ ಸುವಿಧ ಸ್ಯಾನಿಟರಿ ಪ್ಯಾಡ್ ಗಳನ್ನು ಒಂದು ರೂಪಾಯಿ ದರದಲ್ಲಿ ಮಾರಾಟ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿವಿ ಸದಾನಂದಗೌಡ  ಹೇಳಿದ್ದಾರೆ.

ಕಳೆದ 2020ರ ಡಿಸೆಂಬರ್ ನಲ್ಲಿ 3.6 ಕೋಟಿ “ಸುವಿಧ” ಜನೌಷಧಿ ಸ್ಯಾನಿಟರಿ ಪ್ಯಾಡ್ ಗಳಿಗೆ ಬೇಡಿಕೆಗಳು ಬಂದಿದೆ. ಮುಂದುವರೆದಂತೆ ಒಟ್ಟು 30 ಕೋಟಿ ಜನೌಷಧಿ ಸ್ಯಾನಿಟರಿ ಪ್ಯಾಡ್ ಗಳ ಟೆಂಡರ್ ಅನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿದ್ದಾರೆ. 

Spread the love