ಮಾರ್ಚ್‌ವರೆಗೆ ಅಮೆರಿಕಾದಲ್ಲಿ ವಲಸೆ ವೀಸಾ ನಿರ್ಬಂಧ

ವಾಷಿಂಗ್ಟನ್, ಜ. ೧- ಈ ವರ್ಷದ ಮಾರ್ಚ್ ೩೧ರವರೆಗೆ ವಲಸೆ, ಕೆಲಸ ವೀಸಾಗಳಿಗೆ ಅಮೆರಿಕಾದಲ್ಲಿ ನಿರ್ಬಂಧವನ್ನು ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದುವರಿಸಿದ್ದಾರೆ. ಇದರಿಂದಾಗಿ ಸಾವಿರಾರು ಮಂದಿ ವಿದೇಶಿ ನೌಕರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕೋವಿಡ್ ೧೯ ಸಾಂಕ್ರಾಮಿಕ ರೋಗದ ನಡುವೆ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದ್ದು, ಇಂತಹ ಸಂದರ್ಭದಲ್ಲೂ ದೇಶದ ನಾಗರಿಕರನ್ನು ರಕ್ಷಿಸಲು ವಲಸೆ ನೀತಿಗಳಿಗೆ ಸಂಬಂಧಿಸಿದ ನಿಷೇಧವನ್ನು ಮುಂದುವರಿಸಿದ್ದಾರೆ.
ಗ್ರೀನ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮತ್ತು ತಾತ್ಕಾಲಿಕ ವಿದೇಶಿ ಕೆಲಸಗಾರರ ವೀಸಾದಡಿ ಅಮೆರಿಕಕ್ಕೆ ತೆರಳಿದವರಿಗೆ ಸಮಸ್ಯೆ ಎದುರಾಗಿದ್ದು ಈ ವೀಸಾ ನೀತಿ ಮಾರ್ಚ್ ತಿಂಗಳವರೆಗೆ ಮುಂದುವರಿಯಲಿದ್ದು, ಕಳೆದ ಏಪ್ರಿಲ್ ಮತ್ತು ಜೂನ್‌ನಲ್ಲಿ ಹೊರಡಿಸಲಾಗಿದ್ದು ಈ ನಿಷೇಧ ನೀತಿ ನಿನ್ನೆಗೆ ಮುಕ್ತಾಯಗೊಂಡಿತ್ತು.
ಆದರೆ ಟ್ರಂಪ್ ಅವರು ನಿಷೇಧದ ಅವಧಿಯನ್ನು ಇನ್ನು ಮೂರು ತಿಂಗಳಿಗೆ ವಿಸ್ತರಿಸಿದ್ದಾರೆ. ಟ್ರಂಪ್ ಅವರು ಅಧ್ಯಕ್ಷೀಯ ಸುಗ್ರೀವಾಜ್ಞೆ ಅಧಿಕಾರದ ಮೂಲಕ ಈ ಆದೇಶ ಹೊರಡಿಸಿದ್ದಾರೆ.
ಅಮೆರಿಕಾದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಈ ತಿಂಗಳ ೨೦ ರಂದು ಅಧಿಕಾರ ವಹಿಸಿಕೊಳ್ಳಲಿದ್ದು ಟ್ರಂಪ್ ಅವರ ನಿರ್ಧಾರವನ್ನು ಈ ಹಿಂದೆಯೂ ಟೀಕಿಸಿದ್ದರು.
ಬೈಡೆನ್ ಅಧಿಕಾರ ವಹಿಸಿಕೊಂಡ ನಂತರ ನಿಷೇಧವನ್ನು ಹಿಂತೆಗೆದುಕೊಳ್ಳತ್ತಾರೆ ಎಂಬ ಬಗ್ಗೆಯೂ ಯಾವುದೇ ಹೇಳಿಕೆ ನೀಡಿಲ್ಲ.