ಮಾರ್ಗಸೂಚಿ ಬದಲಾವಣೆ ತಗ್ಗಿದ ಜನಸಂದಣಿ

ಹುಬ್ಬಳ್ಳಿ, ಮೇ ೩: ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ರಾಜ್ಯಾದ್ಯಂತ ಜನತಾ ಕರ್ಫ್ಯೂ ಮಾರ್ಗಸೂಚಿ ಹೊರಡಿಸಿದ್ದು, ಆದರೆ ದಿ. ಮೇ ೧ ರಂದು ಮತ್ತೆ ಮಾರ್ಗಸೂಚಿ ಪರಿಷ್ಕರಿಸಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ಇದರಿಂದಾಗಿ ಪ್ರತಿದಿನ ಬೆಳಿಗ್ಗೆ ೬ ಗಂಟೆಯಿಂದ ೧೦ ಗಂಟೆಯವರೆಗೆ ಜನಜಂಗುಳಿಯಿಂದ ತುಂಬುತ್ತಿದ್ದ ತರಕಾರಿ ಮಾರಾಟ ಪ್ರದೇಶಗಳು ಸ್ತಬ್ಧಗೊಂಡಿದ್ದು, ಕೊರೊನಾ ನಿಯಂತ್ರಣಕ್ಕೆ ತುಸು ನಿಟ್ಟಿಸಿರು ಬಿಟ್ಟಂತಾಗಿದೆ.
ಮೊದಲಿನ ಮಾರ್ಗಸೂಚಿಯಂತೆ ತರಕಾರಿ ಮಾರಾಟಕ್ಕೆ ಸ್ಥಳ ನಿಗದಿಪಡಿಸಿ ಬೆಳಿಗ್ಗೆ ೬ ರಿಂದ ೧೦ ಗಂಟೆಯವರೆಗೆ ಅನುಮತಿ ನೀಡಲಾಗಿತ್ತು. ಆದರೆ ಬೆಳ್ಳಂಬೆಳಗ್ಗೆ ಜನರು ಮಾರಾಟ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸುತ್ತಿದ್ದುದರಿಂದ ಜನ ನಿಯಂತ್ರಣ, ಸಾಮಾಜಿಕ ಅಂತರ ಅಸಾಧ್ಯವಾಗಿತ್ತು. ಇದನ್ನು ಪರಿಗಣಿಸಿ ಮತ್ತೆ ಸರ್ಕಾರ ಈಗ ಪರಿಷ್ಕೃತ ಆದೇಶವೊಂದನ್ನು ಹೊರಡಿಸಿದ್ದು, ಜನರು ಒಂದೆಡೆ ಸೇರುವಿಕೆಗೆ ತಡೆ ನೀಡಿದಂತಾಗಿದೆ.
ಸದ್ಯ ಸಂತೆ ಹಾಗೂ ವಾರದ ಸಂತೆಗಳನ್ನು ನಿರ್ಬಂಧಿಸಿ, ಬದಲಿಗೆ ಬೆಳಿಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಹಾಪ್‌ಕಾಮ್ಸ್, ಎಲ್ಲ ಹಾಲಿನ ಬೂತ್‌ಗಳು, ತಳ್ಳುವ ಗಾಡಿಗಳಲ್ಲಿ ಹಣ್ಣು ಹಾಗೂ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಪಿಎಂಸಿ ಹಾಗೂ ದಿನಸಿ ಅಂಗಡಿಗಳನ್ನು ಬೆಳಿಗ್ಗೆ ೬ ಗಂಟೆಯಿಂದ ಮದ್ಯಾಹ್ನ ೧೨ ಗಂಟೆಯವರೆಗೆ ಮಾತ್ರ ತೆರೆಯಲು ಅನುಮತಿಸಿದೆ. ಈ ಹೊಸ ನಿಯಮಗಳಿಂದಾಗಿ ಜನ ಒಂದೆಡೆ ಸೇರದೆ ಕೊರೊನಾ ಹರಡುವಿಕೆಗೆ ಕಡಿವಾಣ ಹಾಕಿದಂತಾಗಿದೆ.
ಹುಬ್ಬಳ್ಳಿಯ ಸಿದ್ದಾರೂಢ ಮಠ ಮುಖ್ಯರಸ್ತೆ, ಗಿರಣಿ ಚಾಳ, ಹೊಸೂರ ಪ್ರದೇಶ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹಾಗೂ ಧಾರವಾಡದ ಎಪಿಎಮ್‌ಸಿ ನೂತನ ಮಾರುಕಟ್ಟೆ, ಕೆಲ ಪ್ರದೇಶಗಳಲ್ಲಿ ಈ ಮೊದಲು ಹಣ್ಣು, ತರಕಾರಿ ಮಾರಾಟಕ್ಕೆ ಸ್ಥಳ ನಿಗದಿಪಡಿಸಲಾಗಿತ್ತು. ಆದರೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಗಿಬಿದ್ದು, ಖರೀದಿಯಲ್ಲಿ ತೊಡಗುತ್ತಿದ್ದರು. ಅಲ್ಲದೆ ಸಾಮಾಜಿಕ ಅಂತರವೂ ಇಲ್ಲದೆ, ಸರಿಯಾಗಿ ಮಾಸ್ಕ್ ಧರಿಸದೆ ಹೇಗೆಂದರೆ ಹಾಗೆ ಜನರು ಖರೀದಿಯ ಭರಾಟೆಯಲ್ಲಿ ತೊಡಗುತ್ತಿದ್ದರು. ಆದರೆ ಹೊಸ ಮಾರ್ಗಸೂಚಿಯಿಂದ ಈಗ ಇದಕ್ಕೆಲ್ಲ ಬ್ರೆಕ್ ಬಿದ್ದಂತಾಗಿದೆ.
ತರಕಾರಿ ಮಾರಾಟಗಾರರು ತಳ್ಳುವ ಗಾಡಿಗಳಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದುದು ನಗರದಲ್ಲಿ ಅಲ್ಲಲ್ಲಿ ಕಂಡುಬಂತು.
ಹೆಚ್ಚದ ವಾಹನಗಳ ಭರಾಟೆ:
ಬೆಳಿಗ್ಗೆ ೬ ಗಂಟೆಯಿಂದ ಮದ್ಯಾಹ್ನ ೧೨ ಗಂಟೆಯವರೆಗೆ ದಿನಸಿ ಅಂಗಡಿಗಳಿಗೆ ಅನುಮತಿ ನೀಡಲಾಗಿದ್ದು, ಜನರು ಅಂಗಡಿಗಳ ಮುಂದೆ ನಿಂತು ದಿನಸಿ ಖರೀದಿಯಲ್ಲಿ ತೊಡಗಿದ್ದುದು ಕಂಡುಬಂತು. ಇದನ್ನೇ ನೆಪವಾಗಿರಿಸಿ ಕೆಲ ದ್ವಿಚಕ್ರ ವಾಹನಗಳು ಹಾಗೂ ಕಾರು ಆಟೋ ರಿಕ್ಷಾಗಳು ರಸ್ತೆಗಳಲ್ಲಿ ಓಡಾಡುತ್ತಿರುವುದು ಕಂಡುಬಂತು. ೧೨ ಗಂಟೆಯ ನಂತರ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದು, ಅಲ್ಲಲ್ಲಿ ಓಡಾಡುತ್ತಿದ್ದ ವಾಹನಗಳನ್ನು ತಡೆದು ಪೊಲೀಸರು ವಿಚಾರಿಸಿ ಕಳುಹಿಸುತ್ತಿದ್ದುದು ಕಂಡುಬಂತು.
ಕೆಲ ಕಡೆಗಳಲ್ಲಿ ಅವಧಿ ಮೀರಿ ಹೊರ ಬಂದ ದ್ವಿಚಕ್ರವಾಹನ ಸವಾರರನ್ನು ತಡೆದು ವಿಚಾರಿಸಿದ ಪೊಲೀಸರು ನಿಯಮ ಉಲ್ಲಂಘನೆಗೆ ದಂಡ ವಿಧಿಸಿದರು.