ಮಾರ್ಗಸೂಚಿ ಪಾಲಿಸಿ ಕೊರೊನಾ ನಿಯಂತ್ರಿಸಿ: ಬೊಮ್ಮಾಯಿ ಮನವಿ

ಬೆಂಗಳೂರು, ಏ. ೨೭- ಕೊರೊನಾ ತಡೆಗೆ ಇಂದು ರಾತ್ರಿಯಿಂದಲೇ ಕಠಿಣ ನಿಯಮಗಳು ಜಾರಿಯಾಗಲಿದ್ದು, ಸರ್ಕಾರ ಜಾರಿ ಮಾಡಿರುವ ಮಾರ್ಗಸೂಚಿಗಳನ್ನು ಪಾಲಿಸಿ ಪ್ರತಿಯೊಬ್ಬರು ಕೊರೊನಾ ತಡೆಗೆ ಕೈಜೋಡಿಸಬೇಕು ಎಂದು ಗೃಹ ಸಚಿವ ಬಸವರಾಜಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ೧೪ ದಿನ ಜನ ಸ್ವಯಂ ನಿರ್ಬಂಧ ಹೇರಿಕೊಂಡರೆ ಕೊರೊನಾ ನಿಗ್ರಹಿಸಲು ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕೊರೊನಾ ನಿಯಂತ್ರಣ ಪಾಲಿಸಿ ಕೊರೊನಾ ತಡೆಗೆ ಜಾರಿ ಮಾಡಿರುವ ಕರ್ಫ್ಯೂವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಮಹಾರಾಷ್ಟ್ರದಲ್ಲಿ ಅಲ್ಲಿನ ಸರ್ಕಾರ ಜಾರಿ ಮಾಡಿದ್ದ ಕಠಿಣ ಮಾರ್ಗಸೂಚಿಗಳನ್ನು ಜನ ಪಾಲಿಸುವ ಮೂಲಕ ಸೋಂಕಿನ ಪ್ರಮಾಣ ಇಳಿಕೆಯಾಗಿದೆ. ರಾಜ್ಯದಲ್ಲೂ ಸೋಂಕು ಕಡಿಮೆಯಾಗಲು ಜನ ಸರ್ಕಾರ ಜಾರಿ ಮಾಡಿರುವ ನಿರ್ಬಂಧಗಳನ್ನು ಪಾಲಿಸುವಂತೆ ಕೋರಿದರು.
ಇಂದು ರಾತ್ರಿಯಿಂದಲೇ ಕಠಿಣ ನಿಯಮಗಳು ಜಾರಿಯಾಗಲಿದ್ದು, ಕಟ್ಟುನಿಟ್ಟಾಗಿ ಸರ್ಕಾರದ ನಿಯಮಗಳನ್ನು ಜಾರಿ ಮಾಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು.
ಮುಂದಿನ ೧೪ ದಿನ ಜನ ಅನಗತ್ಯ ಹಾಗೂ ಅನವಶ್ಯಕವಾಗಿ ಓಡಾಟ ನಡೆಸಬಾರದು. ಕಾನೂನು ಕ್ರಮಕ್ಕಿಂತ ಜನರಿಗೆ ತಿಳುವಳಿಕೆ ಹೇಳುವುದನ್ನು ಪೊಲಿಸರು ಮಾಡುತ್ತಾರೆ. ಆಗಲೂ ಜನ ಮಾತು ಕೇಳದಿದ್ದರೆ ಕ್ರಮ ಆಗುತ್ತೆ ಎಂದರು.
ಕಟ್ಟಡ ಕಾರ್ಮಿಕರು ಸೇರಿದಂತೆ ಉತ್ಪಾದನಾ ವಲಯದ ಕಾರ್ಮಿಕರಿಗೆ ಓಡಾಡಲು ಯಾವುದೇ ತೊಂದರೆ ಇಲ್ಲ. ಅಗತ್ಯ ಸೇವೆಯಡಿ ಈ ಸೇವೆಗಳು ಬರುವುದರಿಂದ ಕಾರ್ಮಿಕರ ಓಡಾಟಕ್ಕೆ ನಿರ್ಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಜನ ಜವಾಬ್ದಾರಿಯಿಂದ ವರ್ತಿಸಿದರೆ ಎಲ್ಲವೂ ಸಾಧ್ಯ. ಜನರಿಗೆ ತೊಂದರೆಯಾಗದಂತೆ ಅವಶ್ಯ ಖರೀದಿಗಳಿಗೂ ಬೆಳಗ್ಗೆ ೪ ಗಂಟೆ ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ಅವರು ಹೇಳಿದರು.
ಜಿಂದಾಲ್‌ಗೆ ಭೂಮಿ ಮಾರಾಟ ಸಂಬಂಧ ಸಚಿವ ಸಂಪುಟದಲ್ಲಿ ಆಗಿರುವ ತೀರ್ಮಾನದ ಬಗ್ಗೆ ಕೈಗಾರಿಕಾ ಇಲಾಖೆ ಸ್ಪಷ್ಟನೆ ನೀಡಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.