ಮಾರ್ಗಸೂಚಿ ಪಾಲಿಸಲು ಸೂಚನೆ

ಚಾಮರಾಜನಗರ, ಏ.20- ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಚಾಮರಾಜನಗರದ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿಗಳಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿರುವ ಮಾರ್ಗ ಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಚಾಮರಾಜನಗರದ ವಕ್ಫ್ ಮಂಡಳಿಯ ಅಧ್ಯಕ್ಷ ಹಾಗೂ ಶಿವನಸಮುದ್ರದ ದರ್ಗಾ ಆಡಳಿತಾಧಿಕಾರಿ ಅಪ್ಸರ್ ಪಾಷ ಜಿಲ್ಲಾ ಮಸೀದಿಗಳ ಆಡಳಿತ ಮಂಡಳಿಗಳಿಗೆ ಸೂಚಿಸಿದರು.
ನಗರದ ವಕ್ಫ್ ಮಂಡಳಿಯ ಕಛೇರಿಯಲ್ಲಿ ಮಾತನಾಡಿ ಮಾಹಿತಿ ನೀಡಿದ ಇವರು, ರಂಜಾನ್ ಹಿನ್ನೆಲೆಯಲ್ಲಿ ತಿಂಗಳಾಧ್ಯಂತ ಕೊರೋನಾ ತಡೆಗಟ್ಟುವ ಸಂಪೂರ್ಣ ಮಾರ್ಗ ಸೂಚಿಯನ್ನು ಅನುಸರಿಸಲು ಜಿಲ್ಲೆಯ ಮುಸ್ಲಿಂ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಮಾಸ್ಕ್ ಧರಿಸುವುದು, ಸ್ಯಾನಿಟ್ರೈಜ್ ಮಾಡುವುದು, ಸಾಮಾಜಿಕ ಅಂತರ ಕಾಪಾಡುವುದು, ಮನೆಯಿಂದಲೇ ಜಾನಿಮಾಜ್ ತಂದು ಮಸೀದಿಯಲ್ಲಿ ನಮಾಝ್ ಮಾಡುವುದು, 60 ವರ್ಷ ಮೇಲ್ಪಟ್ಟ ಹಾಗೂ 10 ವರ್ಷಗಳ ಕಡಿಮೆ ಇರುವ ಮಕ್ಕಳು ತಮ್ಮ ಮನೆಗಳಲ್ಲೇ ನಮಾಝ್ ಮಾಡುವ ಮೂಲಕ ಕೊರೋನಾ ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಬೇಕೆಂದು ಅಪ್ಸರ್ ಪಾಷ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ರಂಜಾನ್ ಈದ್ ಉಲ್ ಫಿತರ್ ನಮಾಝ್ ಪ್ರಾರ್ಥನೆ ಸಂಬಂಧಿಸಿದಂತೆ ಸರ್ಕಾರ ಸೂಚಿಸುವ ನಿಯಮಗಳನ್ನು ಅನುಸರಿಸಿ ಪ್ರಾರ್ಥನೆ ಸಲ್ಲಿಸಲು ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಇವುಗಳನ್ನು ಮೀರಿ ನಿಯಮಗಳನ್ನು ಗಾಳಿಗೆ ತೂರಿ ನಡೆದರೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಅಪ್ಸರ್ ಪಾಷ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಇಬ್ರಾಹಿಂ ಬೇಗ್, ನಿರ್ದೇಶಕ ಜಬೀಉಲ್ಲಾ, ಶಫೀಉಲ್ಲಾ ಸೇರಿದಂತೆ ಸಮಿತಿಯ ಸದಸ್ಯರು, ವಕ್ಫ್ ಅಧಿಕಾರಿ ಯೂನುಸ್, ತವಾಬ್, ರೂಮಾನ್ ಇದ್ದರು