ಮಾರ್ಗಸೂಚಿ ಪಾಲನೆಗೆ ಸೂಚನೆ

ಬೆಂಗಳೂರು, ನ. ೩೦- ಕೊರೊನಾ ಸೋಂಕಿನ ಹೊಸ ರೂಪಾಂತರ ತಳಿ ಓಮಿಕ್ರಾನ್ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜನರಿಗೆ ಸೂಚನೆ ನೀಡಿದ್ದಾರೆ.
ಕೋವಿಡ್ ಸೋಂಕಿನ ಕ್ಲಸ್ಟರ್‌ಗಳಾಗಿ ಪರಿವರ್ತನೆಯಾಗಿರುವ ಧಾರವಾಡದ ಎಸ್‌ಡಿಎಂ ಕಾಲೇಜು, ಆನೇಕಲ್ ಮತ್ತು ಮೈಸೂರಿನ ಕಾಲೇಜುಗಳಲ್ಲಿ ಹೆಚ್ಚು ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಜೊತೆಗೆ ಸಾಮಾನ್ಯವಾಗಿ ಹೆಚ್ಚು ಹೆಚ್ಚು ಕೊರೊನಾ ಪರೀಕ್ಷೆ ನಡೆಸಲು ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಒಂದು ಕಡೆ ಒಮಿಕ್ರಾನ್ ಸೋಂಕು ಮತ್ತೊಂದು ಕಡೆ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಡೆಲ್ಟಾ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹೊಸ ತಳಿಯ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ವಿದೇಶಗಳಿಂದ ಬರುವ ಪ್ರತಿಯೊಬ್ಬರಿಗೂ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು
ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲಿಯೂ ಜನಸಂದಣಿ ಇರುವ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.
ಕೋವಿಡ್ ಕ್ಲಾಸ್ಟರ್ ಗಳಾಗಿ ಗುರುತಿಸಿಕೊಂಡಿರುವ ನಗರಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಜೊತೆಗೆ ಪರೀಕ್ಷಾ ಪ್ರಮಾಣವನ್ನು ಮತ್ತಷ್ಟು ಹೆಚ್ಚು ಮಾಡಲಾಗಿದೆ ಎಂದು ಅವರು ಹೇಳಿದರು
ಲಾಕ್‌ಡೌನ್ ಇಲ್ಲ
ಸದ್ಯದ ಮಟ್ಟಿಗೆ ರಾಜ್ಯದಲ್ಲಿ ಲಾಕ್‌ಡೌನ್ ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಸದ್ಯ ಪರಿಸ್ಥಿತಿ ಸಹಜವಾಗಿ ನಡೆಯುತ್ತಿದೆ ಅದೇ ಪರಿಸ್ಥಿತಿಗೆ ಆದ್ಯತೆ ನೀಡಲಾಗುವುದು ಹೀಗಾಗಿ ಜನರು ಊಹಾಪೋಹದ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಹೊಸ ಮಾದರಿಯ ತಳಿ ತಡೆಗೆ ರಾಜ್ಯಾದ್ಯಂತ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಿರುವಾಗ ಲಾಕ್‌ಡೌನ್ ಮಾಡಲಾಗುತ್ತಿದೆ ಎನ್ನುವ ಆತಂಕ ಸಾರ್ವಜನಿಕರಲ್ಲಿ ಬೇಡ ಎಂದು ಹೇಳಿದರು.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಆರೋಗ್ಯ ಸಚಿವ ಸುಧಾಕರ್ ಅವರು ಸಭೆ ನಡೆಸಿದ ಬಳಿಕ ಅಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.
ಸಂಘಸಂಸ್ಥೆಗಳು ಮತ್ತು ಹೆಚ್ಚು ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಮಾರ್ಗಸೂಚಿಗಳನ್ನು ಎಲ್ಲರೂ ತಪ್ಪದೇ ಪಾಲಿಸಬೇಕು. ಈ ಮೂಲಕ ಸೋಂಕು ಬರದಂತೆ ತಡೆಯಬೇಕು ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಸದ್ಯಕ್ಕಿಲ್ಲ ಲಾಕ್ ಡೌನ್.

ಊಹಾಪೋಹ ಸುದ್ದಿಗಳಿಗೆ ಜನರು ಕಿವಿಗೊಡಬೇಡಿ.

ರಾಜ್ಯದ ಜನರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ.

ಜನರು ಕಡ್ಡಾಯವಾಗಿ ಮಾರ್ಗಸೂಚಿ ಪಾಲನೆಗೆ ಸೂಚನೆ.

ರಾಜ್ಯಾದ್ಯಂತ ಕಟ್ಟೆಚ್ಚರ.

ಕೊರೊನಾ ಸೋಂಕು ಪತ್ತೆ ಪರೀಕ್ಷೆ ಹೆಚ್ಚು ಮಾಡಲು ಅಧಿಕಾರಿಗಳಿಗೆ ಸೂಚನೆ.

ಜನಸಂದಣಿ ಇರುವ ಪ್ರದೇಶಗಳಲ್ಲಿ ಜನರು ಮಾರ್ಗಸೂಚಿ ಪಾಲಿಸುವುದು ಅಗತ್ಯ.