ಮಾರ್ಗಸೂಚಿ ಅನುಷ್ಟಾನ ನಿಷ್ಕಾಳಜಿ ಬೇಡ: ಜಿಲ್ಲಾಧಿಕಾರಿ

ಗದಗ ಜೂ.5: ಕೋವಿಡ್ ಸೋಂಕು ನಿಯಂತ್ರಣಕ್ಕೆ ಜಿಲ್ಲಾದ್ಯಂತ ವಿಧಿಸಲಾದ ಕಠಿಣ ಮಾರ್ಗಸೂಚಿಗಳ ಅನುಷ್ಟಾನದಲ್ಲಿ ಅಧಿಕಾರಿಗಳ ನಿಷ್ಕಾಳಜಿ ಸಹಿಸಲಾಗದು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಜರುಗಿದ ಕೋವಿಡ್ ಸೋಂಕು ನಿಯಂತ್ರಣ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು. ಸೋಂಕು ನಿಯಂತ್ರಣ ಕಾರ್ಯದಲ್ಲಿ ನಿಯೋಜಿತ ಅಧಿಕಾರಿಗಳು ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಸೋಂಕು ನಿಯಂತ್ರಣ ಹಾಗೂ ಸೋಂಕಿನ ಸರಪಳಿ ತುಂಡರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.
ಸೋಂಕು ನಿಯಂತ್ರಣ ಕಾರ್ಯದಲ್ಲಿ ಸೋಂಕಿತ ವ್ಯಕ್ತಿಯನ್ನು ಹತ್ತಿರದ ಕೋವಿಡ್ ಕೇರ್ ಕೇಂದ್ರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಮೂಲಕ ಸೋಂಕಿತ ವ್ಯಕ್ತಿಯ ಕುಟುಂಬದವರಿಗೆ ಸೋಂಕು ತಗಲದಂತೆ ನಿಗಾ ವಹಿಸಬೇಕು. ಸೋಂಕಿತ ವ್ಯಕ್ತಿ ಕೋವಿಡ್ ಕೇಂದ್ರಕ್ಕೆ ಚಿಕಿತ್ಸೆ ಆಗಮಿಸಲು ನಿರಾಕರಿಸಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅನುಸಾರ ಶಿಸ್ತು ಕ್ರಮ ಜರುಗಿಸಬೇಕು. ಜೊತೆಗೆ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿರುವ ಬಗ್ಗೆ ತಹಶೀಲ್ದಾರರು ನಿಯಮಿತವಾಗಿ ಭೇಟಿ ನೀಡುವ ಮೂಲಕ ಮೇಲುಸ್ತುವಾರಿ ನಿರ್ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋವಿಡ್ ಸೋಂಕಿಗೆ ಮೃತರಾದ ಕುಟುಂಬ ಸದಸ್ಯರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಸೌಲಭ್ಯ ದೊರಕಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ನಿರ್ವಹಿಸಬೇಕು. ಸರ್ಕಾರದ ಒಂದಿಲ್ಲೊಂದು ಯೋಜನೆಯಲ್ಲಿ ಸೋಂಕಿನಿಂದ ಮೃತ ಕುಟುಂಬದ ಸದಸ್ಯರಿಗೆ ಪ್ರಯೋಜನವಾಗಬೇಕು. ಮೃತ ವ್ಯಕ್ತಿಯ ಮಕ್ಕಳಿಗೆ ಸರ್ಕಾರದಿಂದ ಉಚಿತ ಶಿಕ್ಷಣ ಸೌಲಭ್ಯ ದೊರೆಯುವಂತೆ ನಿಗಾ ವಹಿಸಬೇಕೆಂದು ತಹಶೀಲ್ದಾರರುಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸರ್ಕಾರ ಲಸಿಕೆ ನೀಡಲು ನಿಗದಿಪಡಿಸಿದ ಆದ್ಯತಾ ಗುಂಪುಗಳಿಗೆ ತೀವ್ರ ಗತಿಯಲ್ಲಿ ಲಸಿಕಾಕರಣವನ್ನು ನೀಡಬೇಕು. ಆದ್ಯತಾ ವಲಯಗಳ ಅರ್ಹರೆಲ್ಲರಿಗೂ ಲಸಿಕೆ ದೊರೆಯುವಂತೆ ತಹಶೀಲ್ದಾರರು ಮೇಲುಸ್ತುವಾರಿ ಕಾರ್ಯ ನಿರ್ವಹಿಸಬೇಕು. ಜೊತೆಗೆ ಸೋಂಕು ನಿಯಂತ್ರಣ ಕಾರ್ಯದಲ್ಲಿ ನಿಯೋಜಿತ ವಿವಿಧ ಇಲಾಖೆಗಳ ಜೊತೆಗೆ ಸಮನ್ವಯ ಸಾಧಿಸಿ ಸೋಂಕು ತಡೆಗೆ ಮುಂದಾಗುವಂತೆ ತಿಳಿಸಿದರು.
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಅನೇಕ ಕುಟುಂಬಗಳು ಆರ್ಥಿಕವಾಗಿ ಬಲಹೀನವಾಗಿದೆ. ಜಿಲ್ಲೆಯ ವಿವಿಧ ಬ್ಯಾಂಕು, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರಿಗೆ ಸಾಲ ಮರುಪಾವತಿಸಲು ಸಾಧ್ಯವಾಗುತ್ತಿಲ್ಲ. ಹಣಕಾಸು ಸಂಸ್ಥೆಯ ಮುಖ್ಯಸ್ಥರಿಗೆ ಈಗಾಗಲೇ ಸೂಚನೆ ನೀಡಿರುವಂತೆ ಇನ್ನೆರಡು ತಿಂಗಳು ಆರ್ಥಿಕವಾಗಿ ಅಸಹಾಯಕವಾಗಿರುವ ಕುಟುಂಬಗಳಿಂದ ಸಾಲದ ಕಂತು ವಸೂಲಿ ಮಾಡದಿರುವಂತೆ ತಿಳಿಸಲಾಗಿದೆ. ತಹಶೀಲ್ದಾರರು ಸ್ಥಳೀಯವಾಗಿ ಹಣಕಾಸು ಸಂಸ್ಥೆಯವರೊಂದಿಗೆ ಚರ್ಚಿಸಿ ಸಾಲದ ಕಂತು ಮರುಪಾವತಿಗೆ ಕಾಲಾವಕಾಶ ನೀಡುವಂತೆ ತಿಳಿಸಲು ನಿರ್ದೇಶಿಸಿದರು. ಅಧಿಕಾರಿಗಳು ಉಪಸ್ಥಿತರಿದ್ದರು.