ಮಾರುತಿ ಮಾಮಾ ಅವರ ಅಗಲಿಕೆಗೆ ಕಂಬನಿ ಮಿಡಿದ ಗಣ್ಯರು

ಬೀದರ:ಮೇ.4: ಜಿಲ್ಲೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಮಾರೂತಿರಾವ ಗೋಪಿನಾಥರಾವ್ ತಾಂದಳೆ ಅವರ ಅಗಲಿಕೆಗೆ ಜಿಲ್ಲೆಯ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ಸಂಸದ ಭಗವಂತ ಖೂಬಾ ಶೋಕಸಂದೇಶ ತಿಳಿಸುತ್ತ, ಮಾರೂತಿ ಮಾಮಾ ಅವರ ಅಗಲಿಕೆಯಿಂದ ತನಗೆ ತಿವೃ ನೋವುಂಟಾಗಿದ್ದು ಅವರ ಅಗಲಿಕೆಯಿಂದಾದ ದುಖ ತಡೆದುಕೊಳ್ಳುವ ಶಕ್ತಿ ಭಗವಂತನು ದಯಪಾಲಿಸಲಿ ಎಂದು ತಿಳಿಸಿದರು.

ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷರು ಹಾಗೂ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ ಶೋಕ ಸಂತಾಪ ಸೂಚಿಸುತ್ತ, ಮಾರೂತಿರಾವ್ ಅವರ ನಿಧನದ ಸುದ್ದಿ ತಿಳಿದು ತನಗೆ ದಿಗ್ಭ್ರಮೆಯಾಯಿತು. ಅವರ ಅಗಲಿಕೆಯಿಂದ ಮಾಧ್ಯಮ ಕ್ಷೇತ್ರವಷ್ಟೇ ಅಲ್ಲ, ಇಡೀ ಜಿಲ್ಲೆ ಬಡವಾಗಿದೆ ಎಂದು ಕಂಬನಿ ಮಿಡಿದರು.

ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಸಂತಾಪ ಸೂಚಿಸಿ ಮಾತನಾಡಿ, ಮಾಮಾ ಅವರ ಅಗಲಿಕೆ ನಮಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರ ಅಗಲಿಕೆಯಿಂದ ನಮಗೆ ಹಾಗೂ ಜಿಲ್ಲೆಗೆ ಭರಿಸಲಾಗದಷ್ಟು ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ದುಖ ತೋಡಿಕೊಂಡರು.

ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಸಂತಾಪ ವ್ಯಕ್ತಪಡಿಸಿ, ತಾಂದಳೆ ಅವರ ನಿಧನದಿಂದಾಗಿ ಜಿಲ್ಲೆಯ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಮಾರುತಿರಾವ್ ಸರಳ ವ್ಯಕ್ತಿತ್ವ ಹೊಂದಿದ್ದರು. ಕಾಯಕ ಜೀವಿಯಾಗಿದ್ದರು. ಛಾಯಾಚಿತ್ರ ಕ್ಷೇತ್ರದಲ್ಲಿ ಹೆಸರು ಮಾಡಿದ್ದರೂ, ಯಾವುದೇ ಪ್ರಚಾರ, ಪ್ರಶಸ್ತಿ, ಸನ್ಮಾನಗಳಿಗೆ ಆಸೆ ಪಟ್ಟಿರಲಿಲ್ಲ. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಅನೇಕ ರಾಜಕಾರಣಿಗಳ ಛಾಯಾಚಿತ್ರಗಳ ಭಂಡಾರವೇ ಅವರ ಬಳಿ ಇತ್ತು ಎಂದು ಸ್ಮರಿಸಿದ್ದಾರೆ.
ಮಾಮಾ ಅವರ ಅಗಲಿಕೆಗೆ ಶಿವಶಂಕರ ಟೋಕರೆ, ಅನಿಲಕುಮಾರ ಕಮಠಾಣೆ, ಅನಿಲಕುಮಾರ ದೇಶಮುಖ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.