ಮಾರುಕಟ್ಟೆ ಸ್ಥಳಾಂತರಕ್ಕೆ ಆಗ್ರಹಿಸಿ ಮನವಿ

ಲಕ್ಷ್ಮೇಶ್ವರ,ನ 6- ‘ತರಕಾರಿ, ಕಿರಾಣಿ, ಹೂವು, ಹಣ್ಣು ಸೇರಿದಂತೆ ವಾರದ ಸಂತೆಯನ್ನು ಇಲ್ಲಿನ ಉಮಾ ವಿದ್ಯಾಲಯದ ಬಯಲಿನಲ್ಲಿ ನಡೆಸಲು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿ ಗುರುವಾರ ಕನ್ನಡ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ) ಬಣದ ಕಾರ್ಯಕರ್ತರು ಉಪತಹಶೀಲ್ದಾರ ಮಂಜುನಾಥ ದಾಸಪ್ಪನವರ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆಯ ತಾಲ್ಲೂಕು ಘಟಕದ ಘಟಕದ ಅಧ್ಯಕ್ಷ ಮಹೇಶ ಕಲಘಟಗಿ ಮಾತನಾಡಿ ‘ಕೋವಿಡ್-19 ಹಿನ್ನೆಲೆಯಲ್ಲಿ ತಾಲ್ಲೂಕಾಡಳಿತ ವಾರದ ಸಂತೆಯನ್ನು ಬಯಲಿನಲ್ಲಿ ನಡೆಸಲು ಆದೇಶಿಸಿರುವುದು ಸ್ವಾಗತಾರ್ಹ. ಆದರೆ ತಹಶೀಲ್ದಾರರ ಆದೇಶ ಕೇವಲ ಬೀದಿ ಬದಿ ವ್ಯಾಪಾರಸ್ಥರಿಗೆ ಮಾತ್ರ ಅನ್ವಯಿಸುತ್ತಿದೆ. ಇವರನ್ನು ಹೊರತುಪಡಿಸಿ ಕಿರಾಣ ವ್ಯಾಪಾರ ಇದ್ದ ಸ್ಥಳದಲ್ಲಿಯೇ ನಡೆಯುತ್ತಿದೆ. ಹೀಗಾಗಿ ಬಡ ವ್ಯಾಪಾರಸ್ಥರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಕಾರಣ ಕಿರಾಣಿ ಸೇರಿದಂತೆ ಎಲ್ಲ ಬೀದಿ ಬದಿ ವ್ಯಾಪಾರಸ್ಥರಿಗೆ ಉಮಾ ವಿದ್ಯಾಲಯದ ಬಯಲಿನಲ್ಲಿಯೇ ವಾರದ ಸಂತೆ ನಡೆಸುವಂತೆ ಆದೇಶಿಸಬೇಕು’ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಾಯಿಬ್‍ಲಾಲ್ ಕಲೇಗಾರ, ಮಂಜುನಾಥ ಗಾಂಜಿ, ಇಲಿಯಾಸ್ ಮೀರಾನವರ, ಜಿಲಾನಿ ಖವಾಸ್, ಸುಲೇಮಾನ್ ಬಾರಿಗಿಡದ, ನದೀಮ್ ಮಾಗಡಿ, ಸಾದಿಕ್ ಕಡಕೋಳ, ಗೌಸ್‍ಮೋದಿನ್ ಒಂಟಿ, ನಾಸಿರ್‍ಖಾನ್ ಕಿತ್ತೂರ, ಶರತಕುಮಾರ ಸುಣಗಾರ ಇದ್ದರು.